ಬೆಂಗಳೂರು: ಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುವ ಆಸೆಯಲ್ಲಿದ್ದ ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ (Lakshmi Hebbalkar) ಭಾರೀ ನಿರಾಸೆ ಆಗಿದೆ.
ಕೈ ತಪ್ಪಿತಾ ಸಚಿವ ಸ್ಥಾನ?
ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಾರಿ ಸಹ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿ ಇದ್ದರು. ಅದರಲ್ಲೂ ಡಿಕೆ ಶಿವಕುಮಾರ್ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಕಾರಣದಿಂದ ಅವರಿಗೆ ಖಚಿತವಾಗಿ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಭರವಸೆ ಇತ್ತು. ಆದರೆ ಮೂಲಗಳ ಪ್ರಕಾರ, ಅವರಿಗೆ ಸಚಿವ ಸ್ಥಾನ ನೀಡಲಾಗುತ್ತಿಲ್ಲ ಎನ್ನಲಾಗುತ್ತಿದೆ.
ಮುನ್ನೆಲೆಗೆ ಬಂದಿದ್ದ ಮಹಿಳಾ ಡಿಸಿಎಂ ಮ್ಯಾಟರ್
ಡಿಕೆ ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿ ಎಂದು ಖಚಿತವಾದ ನಂತರ ಡಿಸಿಎಂ ಹುದ್ದೆಯ ಬಗ್ಗೆ ಸಹ ಬಹಳ ಚರ್ಚೆಗಳು ಆರಂಭ ಆಗಿದ್ದವು. ಮುಂದಿನ ಡಿ.ಕೆ. ಶಿವಕುಮಾರ್ ಸರ್ಕಾರದಲ್ಲಿ ಪ್ರಾದೇಶಿಕ ಮತ್ತು ಜಾತೀಯ ಸಮತೋಲನ ಕಾಯ್ದುಕೊಳ್ಳಲು ಕಾಂಗ್ರೆಸ್ ವರಿಷ್ಠರು 4 ಉಪಮುಖ್ಯಮಂತ್ರಿ (DCM) ಹುದ್ದೆಗಳನ್ನು ಸೃಷ್ಟಿಸುವ ಹೊಸ ಸೂತ್ರವನ್ನು ಸಿದ್ಧಪಡಿಸಿದ್ದಾರೆ ಎಂಬೆಲ್ಲ ಸುದ್ದಿ ಹರಿದಾಡಿದ್ದವು. ಇದರಲ್ಲಿ ದಲಿತ, ಲಿಂಗಾಯತ, ಒಕ್ಕಲಿಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಆದ್ಯತೆ ನೀಡುವ ಲೆಕ್ಕಾಚಾರವಿದೆ. ಆದರೆ, ಈ 4 ಡಿಸಿಎಂ ಹುದ್ದೆಗಳ ಪೈಕಿ ಕನಿಷ್ಠ ಒಂದು ಸ್ಥಾನವನ್ನು ಮಹಿಳೆಗೆ ನೀಡುವ ಬಗ್ಗೆ ಸಹ ಚರ್ಚೆ ಮಾಡಲಾಗಿತ್ತು. ಈ ಎಲ್ಲದರ ನಡುವೆ ಇತ್ತೀಚೆಗಷ್ಟೇ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರಮಾಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮಿ ಹೆಬ್ಬಾಳ್ಕರ್, ಈಗಾಗಲೇ ವರಿಷ್ಠರ ಮುಂದೆ ತಮ್ಮ ಪ್ರಭಾವ ಮತ್ತು ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳಾ ಸಮುದಾಯಕ್ಕೆ ಹಾಗೂ ಕಾಂಗ್ರೆಸ್‌ನ ಕೈಹಿಡಿದ ಮಹಿಳಾ ವೋಟ್‌ಬ್ಯಾಂಕ್‌ಗೆ ಗೌರವ ನೀಡುವ ನಿಟ್ಟಿನಲ್ಲಿ ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎಂಬ ಚರ್ಚೆ ಈಗ ಗಟ್ಟಿಯಾಗಿ ಕೇಳಿಬಂದಿತ್ತು. ಆದರೆ ಇದೀಗ ಯಾವುದೂ ಸಹ ಆಗುತ್ತಿಲ್ಲ ಎನ್ನಲಾಗಿದೆ.
ಡಿಕೆಶಿ ಸಂಪುಟದಲ್ಲಿ ಡಿಸಿಎಂ ಹುದ್ದೆಗಳೇ ಇಲ್ಲ?
ಪಕ್ಷದ ಮೂಲಗಳ ಪ್ರಕಾರ, ಈ ಬಾರಿ ನೂತನ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಎಂಬ ಹುದ್ದೆಯನ್ನೇ ಸೃಷ್ಟಿ ಮಾಡದಿರಲು ಕಾಂಗ್ರೆಸ್ ವರಿಷ್ಠರು ಗಂಭೀರ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಡಿಸಿಎಂ ಸ್ಥಾನಕ್ಕಾಗಿ ಈಗಾಗಲೇ ತೆರೆಮರೆಯಲ್ಲಿ ಭಾರಿ ಪೈಪೋಟಿ ಮತ್ತು ಲಾಬಿ ನಡೆಯುತ್ತಿರುವುದರಿಂದ, ಸರ್ಕಾರದಲ್ಲಿ ಅನಗತ್ಯವಾಗಿ ಒಂದಕ್ಕಿಂತ ಹೆಚ್ಚು ‘ಪವರ್ ಸೆಂಟರ್’ಗಳನ್ನು ಸೃಷ್ಟಿಸಿ ಗೊಂದಲ ಮಾಡಿಕೊಳ್ಳಲು ಹೈಕಮಾಂಡ್ ಸಿದ್ಧವಿಲ್ಲ. ಈ ಹಿನ್ನೆಲೆಯಲ್ಲಿ, ನಾಯಕತ್ವದ ನಡುವೆ ಭಿನ್ನಾಭಿಪ್ರಾಯ ಮೂಡದಂತೆ ತಡೆಯಲು ಡಿಸಿಎಂ ಹುದ್ದೆಯ ಆಲೋಚನೆಯನ್ನೇ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಡಿಕೆ ಶಿವಕುಮಾರ್ ಜೊತೆ ಪ್ರಮಾಣ ಸ್ವೀಕರಿಸಲಿರುವ ನಾಯಕರು ಇವರೇ!