Thursday, July 16, 2026
Homeಟಾಪ್ ನ್ಯೂಸ್SIR : ಬಿಎಲ್‌ಒಗಳಿಂದಲೇ ಒಂದು ಅರ್ಜಿಗೆ 50 ರೂ. ಡೀಲ್ - ಎಸ್‌ಐಆರ್‌ ಬಗ್ಗೆ...

SIR : ಬಿಎಲ್‌ಒಗಳಿಂದಲೇ ಒಂದು ಅರ್ಜಿಗೆ 50 ರೂ. ಡೀಲ್ – ಎಸ್‌ಐಆರ್‌ ಬಗ್ಗೆ ಸಾ.ರಾ.ಮಹೇಶ್ ಭೀಕರ ಆರೋಪ!

ಮೈಸೂರು: ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮೈಸೂರು(Mysore) ಜಿಲ್ಲೆಯಲ್ಲೂ ಭಾರಿ ಅಕ್ರಮ ನಡೆಯುತ್ತಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್(Minister S.R. Mahesh) ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ಕೆ.ಆರ್. ನಗರದ ಮೂರು ಪ್ರಮುಖ ವಾರ್ಡ್‌ಗಳಲ್ಲಿ ಯಾರದೋ ಎಸ್‌ಐಆರ್ (SIR) ಅರ್ಜಿಗಳನ್ನು ಇನ್ಯಾರೋ ಕೂತು ಭರ್ತಿ ಮಾಡುತ್ತಿದ್ದಾರೆ. ಇದಕ್ಕೆ ಸ್ವತಃ ಬಿಎಲ್‌ಒಗಳೇ ಸಾಥ್ ನೀಡುತ್ತಿದ್ದು, ಬಿಸಿಲಿನಲ್ಲಿ ತಮಗೆ ಪ್ರತಿ ಮನೆ ಮನೆಗೆ ಹೋಗಿ ತಪಾಸಣೆ ಮಾಡಲು ಆಗಲ್ಲ ಎಂಬ ಕಾರಣಕ್ಕೆ, ಒಂದು ಅರ್ಜಿಗೆ 50 ರೂಪಾಯಿ ಕೊಟ್ಟು ಕೆಲವು ರಾಜಕೀಯ ಕಾರ್ಯಕರ್ತರಿಂದ ಅಕ್ರಮವಾಗಿ ಅರ್ಜಿಗಳನ್ನು ಭರ್ತಿ ಮಾಡಿಸುತ್ತಿದ್ದಾರೆ ಎಂದು ಬಿಚ್ಚಿಟ್ಟಿದ್ದಾರೆ.

ಈ ಸಾಮೂಹಿಕ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿರುವ ಗೃಹ ಸಚಿವರ ಹೇಳಿಕೆಗೆ ತೀವ್ರ ಗರಂ ಆಗಿರುವ ಸಾರಾ ಮಹೇಶ್, ಗೃಹ ಸಚಿವರಿಗೆ ಕನಿಷ್ಠ ಕಾನೂನಿನ ಅರಿವೇ ಇಲ್ಲ. ಕಾನೂನು ಗೊತ್ತಿರುವವರು ಯಾರೂ ಈ ರೀತಿ ಮಾತನಾಡುವುದಿಲ್ಲ. ಬೇರೆ ಯಾವ ಸಚಿವರೂ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ, ಆದರೆ ಗೃಹ ಸಚಿವರು ಮಾತ್ರ ಯಾಕೆ ಈ ಕಾನೂನು ಬಾಹಿರ ಕೆಲಸವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ? ಎಸ್‌ಐಆರ್ ಅಂದ ತಕ್ಷಣ ಗೃಹ ಸಚಿವರಿಗೆ ಅಷ್ಟೊಂದು ಭಯ ಯಾಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಇದೇ ವೇಳೆ ಇಡೀ ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) 50:50 ಅನುಪಾತದ ಸೈಟ್ ಹಂಚಿಕೆ ಹಗರಣದ ಕುರಿತು ಆಕ್ರೋಶ ಹೊರಹಾಕಿದ ಸಾರಾ ಮಹೇಶ್, ಈ 50:50 ಅನುಪಾತದ ಸೈಟ್ ಹಂಚಿಕೆಯಲ್ಲಿ ಕೋಟ್ಯಂತರ ರೂಪಾಯಿಗಳ ಬೃಹತ್ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ರು.

ಈಗಾಗಲೇ ಇದರ ತನಿಖೆ ನಡೆಸಿರುವ ತನಿಖಾ ಆಯೋಗಗಳು ವರದಿಯನ್ನು ಕೂಡ ನೀಡಿವೆ. ಆದರೂ ಕೆಲವರು ಜನರನ್ನು ಸಂಪೂರ್ಣವಾಗಿ ದಾರಿ ತಪ್ಪಿಸಿ ಈ 50:50 ಅನುಪಾತದ ಸೈಟ್‌ಗಳನ್ನು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಈ ಎಲ್ಲಾ ಸೈಟ್‌ಗಳನ್ನು ತನ್ನ ವಶಕ್ಕೆ ಪಡೆದು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಇವುಗಳ ಮಾರಾಟ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು. ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಈ 50:50 ಅನುಪಾತದ ಎಲ್ಲಾ ಸೈಟ್‌ಗಳ ರದ್ದತಿಗೆ ತಕ್ಷಣವೇ ಕಠಿಣ ಆದೇಶ ಹೊರಡಿಸಬೇಕು, ಇಲ್ಲದಿದ್ದರೆ ನಾವು ಮುಡಾ ಕಚೇರಿ ಮುಂದೆ ನಿಂತು ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಲೋಕಾಯುಕ್ತದ ತಾರತಮ್ಯದ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಸಚಿವರು, ಇತ್ತೀಚಿನ ದಿನಗಳಲ್ಲಿ ಲೋಕಾಯುಕ್ತದವರು ದೊಡ್ಡ ದೊಡ್ಡ ಐಪಿಎಸ್ (IPS) ಮತ್ತು ಐಎಎಸ್ (IAS) ಅಧಿಕಾರಿಗಳ ಮನೆಗಳ ಮೇಲೆ ಯಾಕೆ ದಾಳಿ ಮಾಡುತ್ತಿಲ್ಲ ಎಂದು ನೇರವಾಗಿ ಪ್ರಶ್ನಿಸಿದರು. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವಲಯದಲ್ಲಿ ಯಾರೂ ಭ್ರಷ್ಟರೇ ಇಲ್ವಾ? ಅಥವಾ ಅವರ್ಯಾರೂ ಲಂಚವನ್ನೇ ಪಡೆದೇ ಇಲ್ವಾ? ಲೋಕಾಯುಕ್ತದ ಕಠಿಣ ಕಾನೂನಿನಿಂದ ಈ ದೊಡ್ಡ ಅಧಿಕಾರಿಗಳು ಏನಾದರೂ ಹೊರಗಿದ್ದಾರಾ ಎಂದು ಚಾಟಿ ಬೀಸಿದ್ದಾರೆ. ಭ್ರಷ್ಟರು ಅಂದಮೇಲೆ ಅವರು ಸರ್ಕಾರದ ಎಲ್ಲಾ ಇಲಾಖೆಯಲ್ಲೂ ಇರುತ್ತಾರೆ. ಆದರೆ ಲೋಕಾಯುಕ್ತದವರು ಮಾತ್ರ ಇಂತಹ ದೊಡ್ಡ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಬಿಟ್ಟು, ಬರೀ ಕೆಳಮಟ್ಟದ ಬೇರೆಯವರ ಮನೆಗಳ ಮೇಲೆ ಯಾಕೆ ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ ಎಂದು ಸಾ.ರಾ.ಮಹೇಶ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ : ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ಮೌಂಟ್ ರಶ್ಮೋರ್‌ನಲ್ಲಿ ಟ್ರಂಪ್ ಭಾಷಣ – VIDEO

ಹೆಚ್ಚಿನ ಸುದ್ದಿ

Change Language »
error: Content is protected !!