ಇರಾನ್ : ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ರಷ್ಯಾದ ವಿಶೇಷ ‘ಡೂಮ್ಸ್‌ಡೇ’ (Dooms day) ವಿಮಾನವೊಂದು ಇರಾನ್ (Iran) ರಾಜಧಾನಿ ಟೆಹ್ರಾನ್‌ನಲ್ಲಿ (Tehran) ಇಳಿದಿದ್ದು, ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇರಾನ್ ಮತ್ತು ಅಮೆರಿಕ (US) ನಡುವೆ ಸದ್ಯ ಸಂಘರ್ಷದ ವಾತಾವರಣ ಇರುವ ಕಾರಣ, ರಷ್ಯಾ ಸೇನೆಯ ಈ ವಿಮಾನದ ದಿಢೀರ್ ಭೇಟಿ ಹಲವು ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.
ಫ್ಲೈಟ್‌ರಾಡಾರ್24 ಮಾಹಿತಿ ಪ್ರಕಾರ, ರಷ್ಯಾದ ವಿಶೇಷ ಫ್ಲೈಟ್ ಸ್ಕ್ವಾಡ್ರನ್‌ಗೆ ಸೇರಿದ ‘ಟುಪೋಲೆವ್ ಟು-214ಪಿಯು’ (Tupolev Tu-214PU) ಎಂಬ ವಿಮಾನವು ಜುಲೈ 13ರ ಸೋಮವಾರ ಬೆಳಗ್ಗೆ ಮಾಸ್ಕೋದಿಂದ ಹೊರಟು ಟೆಹ್ರಾನ್ ತಲುಪಿದೆ. ಮಾಧ್ಯಮಗಳು ಇದನ್ನು ‘ಡೂಮ್ಸ್‌ಡೇ ಪ್ಲೇನ್’ ಎಂದು ಕರೆಯುತ್ತವೆಯಾದರೂ, ಇದು ರಷ್ಯಾದ ಉನ್ನತ ಅಧಿಕಾರಿಗಳಿಗೆ ಅತ್ಯಂತ ಸುರಕ್ಷಿತ ಹಾಗೂ ಸುಧಾರಿತ ಸಂಪರ್ಕ ವ್ಯವಸ್ಥೆಯನ್ನು ಒದಗಿಸುವ ವಿಶೇಷ ಕಮ್ಯುನಿಕೇಷನ್ ವಿಮಾನವಾಗಿದೆ.
ಈ ವಿಮಾನ ಇರಾನ್‌ಗೆ ಭೇಟಿ ನೀಡಿರುವುದರ ಅಧಿಕೃತ ಕಾರಣ ಇನ್ನೂ ಬಹಿರಂಗವಾಗಿಲ್ಲ. ಆದರೆ, ರಷ್ಯಾದ ಪ್ರಮುಖ ರಾಜತಾಂತ್ರಿಕರು ಮತ್ತು ಉನ್ನತ ಮಟ್ಟದ ನಿಯೋಗಗಳು ವಿದೇಶ ಪ್ರವಾಸ ಕೈಗೊಳ್ಳುವಾಗ ಈ ವಿಮಾನವನ್ನು ಬಳಸಲಾಗುತ್ತದೆ. ಈ ಹಿಂದೆಯೂ ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರು ಉಜ್ಬೇಕಿಸ್ತಾನ್‌ಗೆ ಭೇಟಿ ನೀಡಿದ್ದಾಗ ಹಾಗೂ ರಷ್ಯಾದ ಇಂಧನ ಸಚಿವರು ಪಾಕಿಸ್ತಾನ ಮತ್ತು ಇರಾನ್ ಪ್ರವಾಸ ಕೈಗೊಂಡಿದ್ದಾಗ ಇದೇ ವಿಮಾನವು ಅಲ್ಲಿಗೆ ತೆರಳಿತ್ತು.
ಸದ್ಯ ಇರಾನ್‌ನಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರ ಪ್ರವಾಸಕ್ಕೆ ಪೂರ್ವಸಿದ್ಧತೆಗಳು ನಡೆಯುತ್ತಿದ್ದು, ಆ ಹಿನ್ನೆಲೆಯಲ್ಲಿ ಈ ವಿಮಾನ ಅಲ್ಲಿಗೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಇರಾನ್ ವಿದೇಶಾಂಗ ಸಚಿವಾಲಯ ಕೂಡ ರಷ್ಯಾದ ಉನ್ನತಾಧಿಕಾರಿಗಳ ಭೇಟಿಯನ್ನು ಖಚಿತಪಡಿಸಿದೆ. ಆದಾಗ್ಯೂ, ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದಂತಹ ವಾತಾವರಣ ಇರುವ ಈ ಸೂಕ್ಷ್ಮ ಸಮಯದಲ್ಲಿ ರಷ್ಯಾ ವಿಮಾನದ ಈ ಸಂಚಾರವು ಉಭಯ ದೇಶಗಳ ನಡುವಿನ ಮಿಲಿಟರಿ ಸಹಕಾರದ ಸಂಕೇತವೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.