ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸರ್ಕಾರಿ ಶಾಲೆಗಳ ಗ್ರಂಥಾಲಯಗಳಿಗೆ ವಿತರಿಸಲಾಗಿರುವ ಪುಸ್ತಕವೊಂದರಲ್ಲಿ ಪ್ರತ್ಯೇಕತಾವಾದಿ ನಾಯಕರು ಹಾಗೂ ಶಿಕ್ಷೆಗೊಳಗಾದ ಭಯೋತ್ಪಾದಕರನ್ನು ಮಹಾನ್ ವ್ಯಕ್ತಿಗಳು ಮತ್ತು ದಂತಕಥೆಗಳು (Legends) ಎಂದು ವೈಭವೀಕರಿಸಿರುವುದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರ ರಾಜಕೀಯ ಸಂಕಷ್ಟಕ್ಕೆ ಸಿಲುಕಿದೆ. ದೇಶವನ್ನು ಇಭ್ಭಾಗ (Crime) ಮಾಡಲು ಭಾರತದ ವಿರುದ್ಧ ಯುದ್ಧ ಸಾರಿದ್ದ ದೇಶದ್ರೋಹಿಗಳನ್ನು ಶಾಲಾ ಮಕ್ಕಳ ಮುಂದೆ ರೋಲ್ ಮಾಡೆಲ್‌ಗಳಾಗಿ ಬಿಂಬಿಸುತ್ತಿರುವುದರ ವಿರುದ್ಧ ಜಮ್ಮು-ಕಾಶ್ಮೀರ ಪೀಪಲ್ಸ್ ಫೋರಂ (JKPF) ಎಂಬ ನಾಗರಿಕ ಹಕ್ಕುಗಳ ಸಂಘಟನೆ ಹಾಗೂ ಬಿಜೆಪಿ ಆಕ್ಷೇಪ ಎತ್ತಿವೆ.
ಸಮಗ್ರ ಶಿಕ್ಷಣ ಯೋಜನೆಯಡಿ ಪುಸ್ತಕ ವಿತರಣೆ
ಜೆ&ಕೆ ಮಹಾನ್ ವ್ಯಕ್ತಿಗಳು ಮತ್ತು ದಂತಕಥೆಗಳು (ಸರಣಿ 4) (Great Personalities and Legends of J&K – Series 4) ಹೆಸರಿನ ಈ ಪುಸ್ತಕವನ್ನು ಹಿಲಾಲ್ ಅಹ್ಮದ್ ಮತ್ತು ಸಂತೋಷ್ ಮೀನಾ ಎಂಬುವವರು ಸಂಪಾದಿಸಿದ್ದಾರೆ. ಕೇಂದ್ರ ಸರ್ಕಾರದ ಸಮಗ್ರ ಶಿಕ್ಷಣ (Samagra Shiksha) ಯೋಜನೆಯ ಅಡಿಯಲ್ಲಿ ಅನುಮೋದನೆ ಪಡೆದುಕೊಂಡಿರುವ ಈ ಪುಸ್ತಕವನ್ನು ಜಮ್ಮು-ಕಾಶ್ಮೀರ ಸರ್ಕಾರವು 2025-26ರ ಶೈಕ್ಷಣಿಕ ವರ್ಷಕ್ಕಾಗಿ ಖರೀದಿಸಿ, ಇಡೀ ಕೇಂದ್ರಾಡಳಿತ ಪ್ರದೇಶದ ಸರ್ಕಾರಿ ಶಾಲೆಗಳ ಲೈಬ್ರರಿಗಳಿಗೆ ಕಳುಹಿಸಿಕೊಟ್ಟಿದೆ ಎಂದು ಜೆಕೆಪಿಎಫ್ ಆರೋಪಿಸಿದೆ.
ಪುಸ್ತಕದಲ್ಲಿ ಯಾರನ್ನೆಲ್ಲಾ ಹೊಗಳಲಾಗಿದೆ?
ದೇಶದ ಭದ್ರತೆಗೆ ಕಂಟಕವಾಗಿದ್ದ ಪ್ರತ್ಯೇಕತಾವಾದಿಗಳು ಹಾಗೂ ಉಗ್ರರಾದ ಮಕ್ಬೂಲ್ ಭಟ್, ಸೈಯದ್ ಅಲಿ ಶಾ ಗೀಲಾನಿ, ಮಸರತ್ ಆಲಂ ಮತ್ತು ಹುರಿಯತ್ ನಾಯಕ ಮಿರ್ವೈಜ್ ಉಮರ್ ಫಾರೂಕ್ ಅವರಂತಹ ವ್ಯಕ್ತಿಗಳನ್ನು ಈ ಪುಸ್ತಕದಲ್ಲಿ ದೇಶದ ಮಹಾನ್ ನಾಯಕರು ಎಂದು ಚಿತ್ರಿಸಲಾಗಿದೆ.
ಪುಸ್ತಕದಲ್ಲಿ ಶಾಹಿದ್ ಮಕ್ಬೂಲ್ ಭಟ್ ಎಂಬ ಪ್ರತ್ಯೇಕ ಅಧ್ಯಾಯವೇ ಇದ್ದು, ಅದರಲ್ಲಿ ಕೊಲೆಗಾರ ಉಗ್ರ ಮಕ್ಬೂಲ್ ಭಟ್‌ನನ್ನು ಕ್ರಾಂತಿಕಾರಿ ಹಾಗೂ ಶಹೀದ್-ಎ-ಅಜಮ್ ಎಂದು ಕೊಂಡಾಡಲಾಗಿದೆ. ಉಗ್ರ ಮಕ್ಬೂಲ್ ಭಟ್‌ಗೆ ಸುಪ್ರೀಂ ಕೋರ್ಟ್ ಮರಣದಂಡನೆ ವಿಧಿಸಿದ ಹಿನ್ನೆಲೆಯಲ್ಲಿ 1984ರ ಫೆಬ್ರವರಿ 11ರಂದು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು ಎಂಬ ಇತಿಹಾಸವನ್ನು ಇಲ್ಲಿ ತಿರುಚಲಾಗಿದೆ.
ಅಕಾಡೆಮಿಕ್ ಜಿಹಾದ್, ಶಿಕ್ಷಣ ಸಚಿವರ ವಜಾಕ್ಕೆ ಒತ್ತಾಯ
ಈ ಘಟನೆಯನ್ನು ಖಂಡಿಸಿರುವ ಜಮ್ಮು-ಕಾಶ್ಮೀರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಮುಖಂಡ ಸುನಿಲ್ ಶರ್ಮಾ, ಇದು ಎಳೆಯ ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಲು ನಡೆಸಿರುವ ಅಕಾಡೆಮಿಕ್ ಜಿಹಾದ್ (ಶೈಕ್ಷಣಿಕ ಜಿಹಾದ್) ಆಗಿದೆ. ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ತಕ್ಷಣವೇ ತಮ್ಮ ಶಿಕ್ಷಣ ಸಚಿವೆ ಸಕೀನಾ ಇಟೂ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಹಾಗೆಯೇ ಶಾಲಾ ಗ್ರಂಥಾಲಯಗಳಿಗೆ ಈ ವಿವಾದಾತ್ಮಕ ಪುಸ್ತಕವನ್ನು ಶಿಫಾರಸು ಮಾಡಿ, ಸರಬರಾಜು ಮಾಡಿದ ಪ್ರತಿಯೊಬ್ಬರನ್ನೂ ಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ವಕ್ತಾರ ಅಭಿಜೀತ್ ಜಸ್ರೋಟಿಯಾ ಮಾತನಾಡಿ, ಇದು ಆಘಾತಕಾರಿ, ನಾಚಿಕೆಗೇಡಿನ ಮತ್ತು ಅಸಹ್ಯಕರ ಸಂಗತಿ. ನಮ್ಮ ಮಕ್ಕಳಿಗೆ ದೇಶದ್ರೋಹಿಗಳನ್ನು ಲೆಜೆಂಡ್ಸ್ ಎಂದು ಕರೆಯಲು ಕಲಿಸಲಾಗುತ್ತಿದೆ, ಎಂದು ಕಿಡಿಕಾರಿದ್ದಾರೆ.
ಹುತಾತ್ಮರ ಕುಟುಂಬಗಳ ಗಾಯದ ಮೇಲೆ ಉಪ್ಪು ಸವರಿದಂತೆ
ಈ ಅಕ್ರಮವನ್ನು ಮೊದಲು ಬಯಲಿಗೆಳೆದ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಫೋರಂನ ಸದಸ್ಯ ದೀಪಕ್ ಕಪೂರ್ ಮಾತನಾಡಿ, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಹೋರಾಡಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ನಮ್ಮ ಹೆಮ್ಮೆಯ ಹುತಾತ್ಮ ಯೋಧರ ಕುಟುಂಬಗಳಿಗೆ ಸರ್ಕಾರ ಮಾಡಿರುವ ದೊಡ್ಡ ದ್ರೋಹವಿದು. ರಕ್ತಪಿಪಾಸು ಉಗ್ರರನ್ನು ವೈಭವೀಕರಿಸುವ ಮೂಲಕ ಹುತಾತ್ಮರ ಕುಟುಂಬಗಳ ಹಳೆಯ ಗಾಯದ ಮೇಲೆ ಉಪ್ಪು ಸವರುವ ಕೆಲಸ ಮಾಡಲಾಗಿದೆ. ಹೊಸ ಶಿಕ್ಷಣ ನೀತಿಯ (NEP) ಅಡಿಯಲ್ಲಿ ರಚನೆಯಾದ ಪರಿಣಿತರ ಸಮಿತಿ, ಭಾರತೀಯ ಸೇನೆ ಮತ್ತು ಸಾರ್ವಭೌಮತ್ವದ ವಿರುದ್ಧವಾಗಿರುವ ಇಂತಹ ದ್ವೇಷದ ಪುಸ್ತಕಕ್ಕೆ ಹೇಗೆ ಅನುಮೋದನೆ ನೀಡಿತು? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ತಕ್ಷಣವೇ ಮಧ್ಯಪ್ರವೇಶಿಸಿ, ಪುಸ್ತಕ ಪ್ರವೇಶದ ಹಿಂದೆ ಇರುವವರ ವಿರುದ್ಧ ಕಾಲಮಿತಿಯ ತನಿಖೆ ನಡೆಸುವಂತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ನಾಗರಿಕ ಸಮಿತಿ ಮನವಿ ಮಾಡಿದೆ.
ನಾನು ಪುಸ್ತಕ ನೋಡಿಯೇ ಇಲ್ಲ ಎಂದ ಸಿಎಂ ಓಮರ್
ರಾಜಕೀಯ ಬಿರುಗಾಳಿ ಎಬ್ಬಿಸಿರುವ ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ಜಾರಿಕೊಂಡಿದ್ದಾರೆ. ನಾನು ಆ ಪುಸ್ತಕವನ್ನು ಇದುವರೆಗೆ ಓದಿಲ್ಲ, ಕನಿಷ್ಠ ಪಕ್ಷ ಆ ಪುಸ್ತಕ ಹೇಗಿದೆ ಎಂಬುದನ್ನು ಕಣ್ಣಿನಿಂದ ನೋಡಿಯೂ ಇಲ್ಲ, ಎಂದು ಹೇಳುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿL: ಟಿಎಂಸಿಗೆ ಮತ್ತೊಂದು ಮರ್ಮಾಘಾತ – ರಾಜ್ಯಾಧ್ಯಕ್ಷ ಸ್ಥಾನ ತೊರೆದ ಚಂದ್ರಿಮಾ ಭಟ್ಟಾಚಾರ್ಯ