ಮೆಲ್ಬರ್ನ್: ಭಾರತದ ಹಿರಿಯ ಹಾಗೂ ಅನುಭವಿ ಟೆನ್ನಿಸ್ ಆಟಗಾರ 44 ವರ್ಷದ ರೋಹನ್ ಬೋಪಣ್ಣ, ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಚೀನಾದ ಆಟಗಾರ್ತಿ ಶುವಾಯ್ ಜಾಂಗ್ ಅವರೊಂದಿಗೆ ಮಿಶ್ರ ಡಬಲ್ಸ್ ಆಡುತ್ತಿರುವ ಬೋಪಣ್ಣ, ಇಂದು ದ್ವಿತೀಯ ಸುತ್ತಿನ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಅಮೆರಿಕದ ಟೇಲರ್ ಟೌನ್‌ಸೆಂಡ್ ಮತ್ತು ಮೊನಾಕೊದ ಹ್ಯೂಗೋ ನೈಸ್ ಜೋಡಿ ವಿರುದ್ಧ ಆಡಬೇಕಿತ್ತು. ಆದರೆ ಆ ಜೋಡಿ ಪಂದ್ಯದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ, ಬೋಪಣ್ಣ ಜೋಡಿಗೆ ವಾಕ್ ಓವರ್ ಲಭಿಸಿ, ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿತು.
ಈ ಮೊದಲು ನಡೆದ ಪುರುಷರ ಡಬಲ್ಸ್‌ನಲ್ಲಿ ನಿರಾಸೆ ಅನುಭವಿಸಿದ್ದ ರೋಹನ್ ಬೋಪಣ್ಣ ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ 6-4, 6-4ರಿಂದ ಇವಾನ್ ದೋಡಿಗ್ ಮತ್ತು ಕ್ರಿಸ್ಟಿನಾ ಮ್ಲಾಡೆನೊವಿಕ್ ಅವರನ್ನು ಮಣಿಸಿತ್ತು.
ಆಸ್ಟ್ರೇಲಿಯಾ ಓಪನ್ ಮಿಶ್ರ ಡಬಲ್ಸ್ ನಲ್ಲಿ ಈ ಹಿಂದೆ 2 ಬಾರಿ ಫೈನಲ್ ಪ್ರವೇಶಿಸಿರುವ ಬೋಪಣ್ಣ, ಎರಡೂ ಬಾರಿ ರನ್ನರ್ ಅಪ್ ಆಗಿದ್ದರು ಹಾಗೂ ಡಬಲ್ಸ್ ವಿಭಾಗದಲ್ಲಿ ಒಮ್ಮೆ ಚಾಂಪಿಯನ್ ಆಗಿದ್ದರು.