Saturday, May 16, 2026
Homeಕ್ರೈಂROAD RAGE: ಖಾಕಿ ಪಡೆಗೂ ಕ್ಯಾರೆ ಎನ್ನದ ಆಟೋ ಪುಂಡ- ಆಟೋ ಗ್ಲಾಸ್ ಪುಡಿಪುಡಿ!- VIDEO

ROAD RAGE: ಖಾಕಿ ಪಡೆಗೂ ಕ್ಯಾರೆ ಎನ್ನದ ಆಟೋ ಪುಂಡ- ಆಟೋ ಗ್ಲಾಸ್ ಪುಡಿಪುಡಿ!- VIDEO

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ರಸ್ತೆಗಳಲ್ಲಿ ಸಾರ್ವಜನಿಕರ ನೆಮ್ಮದಿ ಕೆಡಿಸುತ್ತಿರುವ ‘ರೋಡ್ ರೇಜ್’ (Road Rage) ಪ್ರಕರಣಗಳು ದಿನದಿಂದ ದಿನಕ್ಕೆ ಮಿತಿ ಮೀರುತ್ತಿವೆ. ಸಿಲಿಕಾನ್ ಸಿಟಿಯಲ್ಲಿ ಆಟೋ ಚಾಲಕನೊಬ್ಬ (Auto Driver) ಪೊಲೀಸರ ಮುಂದೆಯೇ ಅಸಭ್ಯವಾಗಿ ವರ್ತಿಸಿ, ರೌಡಿಸಂ ಪ್ರದರ್ಶಿಸಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ರಸ್ತೆಯೊಂದರಲ್ಲಿ ಸಂಚರಿಸುವಾಗ ಆಟೋಗಳು ಪರಸ್ಪರ ಸ್ವಲ್ಪ ತಗುಲಿದೆ ಎನ್ನುವ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ, ವಿಕೃತ ರೂಪಕ್ಕೆ ತಿರುಗಿದೆ. ಎದುರಾಳಿ ಆಟೋ ಚಾಲಕ ತನ್ನ ಸಹೋದ್ಯೋಗಿ ಎಂಬ ಕನಿಷ್ಠ ಸೌಜನ್ಯವೂ ಇಲ್ಲದೆ ಪುಂಡ ಚಾಲಕ ರಸ್ತೆಯಲ್ಲೇ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ, ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಇದ್ದರೂ ಯಾವುದಕ್ಕೂ ಕ್ಯಾರೆ ಎನ್ನದ ಈತ, ಎದುರಾಳಿ ಆಟೋದ ಗ್ಲಾಸ್ ಅನ್ನು ಪುಡಿಪುಡಿ ಮಾಡಿ ತನ್ನ ರೌದ್ರಾವತಾರ ತೋರಿಸಿದ್ದಾನೆ.

ಘಟನಾ ಸ್ಥಳದಲ್ಲಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರೂ ಕಿಂಚಿತ್ತೂ ಹೆದರದ ಈ ಕಿಡಿಗೇಡಿ, ತನ್ನ ಪುಂಡಾಟ ಮುಂದುವರಿಸಿ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಸುಮಾರು ಎರಡು ದಿನಗಳ ಹಿಂದೆ ನಡೆದ ಈ ಕೃತ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಚಾಲಕನ ಗೂಂಡಾಗಿರಿ ಕಂಡು ಬೆಂಗಳೂರಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದಿನನಿತ್ಯದ ಸಂಚಾರದ ವೇಳೆ ಇಂತಹ ರೋಡ್ ರೇಜ್ ಪ್ರಕರಣಗಳು ಹೆಚ್ಚುತ್ತಿರುವುದು ಪ್ರಯಾಣಿಕರಲ್ಲಿ ಮತ್ತು ವಾಹನ ಸವಾರರಲ್ಲಿ ಭೀತಿ ಹುಟ್ಟಿಸಿದೆ. ಕಾನೂನಿಗೆ ಕಿಮ್ಮತ್ತು ನೀಡದ ಇಂತಹ ಚಾಲಕರ ಪರವಾನಗಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸದ್ಯ ಪೊಲೀಸರ ಕಣ್ಣೆದುರೇ ಸವಾಲು ಹಾಕಿ ಪರಾರಿಯಾಗಿರುವ ಈ ಆಟೋ ಪುಂಡನಿಗಾಗಿ ಖಾಕಿ ಪಡೆ ಬಲೆ ಬೀಸಿದ್ದು, ತನಿಖೆ ಚುರುಕುಗೊಳಿಸಿದೆ.

ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ಭೀಕರ ದಾಳಿ – 100 ಅಡಿ ದೂರ ಎಳೆದೊಯ್ದ ಶ್ವಾನ!

ವಿಜಯಪುರದ (Vijayapur) ರಾಜಕುಮಾರ್ ಲೇಔಟ್‌ನಲ್ಲಿ ಮೈ ಜುಂ ಎನಿಸುವ ಘಟನೆಯೊಂದು (Shocking) ಸಂಭವಿಸಿದೆ. ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನನ್ನು ಬೀದಿ ನಾಯಿಯೊಂದು (Dog Attack) ಕಚ್ಚಿ ಸುಮಾರು 100 ಅಡಿ ದೂರದವರೆಗೆ ಎಳೆದೊಯ್ದಿದೆ. ಈ ಭಯಾನಕ ದೃಶ್ಯವನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ನಗರದ ರಾಜಕುಮಾರ್ ಲೇಔಟ್ ನಿವಾಸಿ ಸಂತೋಷ ಬಿರಾದಾರ ಅವರ ಪುತ್ರ ವಿರಾಜ್ (3) ಎಂಬ ಬಾಲಕನ ಮೇಲೆ ಈ ದಾಳಿ ನಡೆದಿದೆ. ನಿನ್ನೆ ಸಾಯಂಕಾಲ ಸುಮಾರು 6 ಗಂಟೆಯ ವೇಳೆಗೆ ವಿರಾಜ್ ತನ್ನ ಮನೆಯ ಮುಂದೆ ಆಟವಾಡುತ್ತಿದ್ದನು. ಈ ಸಂದರ್ಭದಲ್ಲಿ ಏಕಾಏಕಿ ಬಂದ ಬೀದಿ ನಾಯಿಯೊಂದು ಬಾಲಕನ ಮೇಲೆರಗಿ, ಅವನನ್ನು ಬಾಯಿಯಲ್ಲಿ ಕಚ್ಚಿ ಹಿಡಿದು ರಸ್ತೆಯಲ್ಲಿ ಎಳೆಯುತ್ತಾ ಸಾಗಿದೆ. ನಾಯಿ ಬಾಲಕನನ್ನು ಸುಮಾರು 100 ಅಡಿ ದೂರದವರೆಗೆ ಎಳೆದೊಯ್ದಿದೆ.

ಈ ಆಘಾತಕಾರಿ ದೃಶ್ಯವನ್ನು ಗಮನಿಸಿದ ತಕ್ಷಣ ಸ್ಥಳೀಯರು ಕಿರುಚುತ್ತಾ ನಾಯಿಯ ಹಿಂದೆ ಓಡಿ ಹೋಗಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಜನರು ಬಾಲಕನನ್ನು ನಾಯಿಯ ಬಾಯಿಯಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಿ ಕಡಿತದಿಂದ ತೀವ್ರವಾಗಿ ಗಾಯಗೊಂಡಿರುವ ವಿರಾಜ್‌ನನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ : ಹೋಟೆಲ್ , ಆಟೋ ಬೆಲೆಯೇರಿಕೆ ಬೆನ್ನಲ್ಲೇ ದರ ಹೆಚ್ಚಿಸಲು ಮುಂದಾದ ಪಿಜಿ ಗಳು!

ಹೆಚ್ಚಿನ ಸುದ್ದಿ

Change Language »
error: Content is protected !!