ಬೆಂಗಳೂರು : ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರದ ಕರಾವಳಿ ಮತ್ತು ಮಲೆನಾಡು ಭಾಗದ ಪ್ರವಾಸೋದ್ಯಮ ವಿಭಾಗದ ಪ್ರಚಾರ ರಾಯಭಾರಿಯಾಗಿ ನಿಯೋಜನೆಗೊಂಡಿರುವ ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ (Rishab shetty) ಅವರು ಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಪ್ರಾದೇಶಿಕ ಪ್ರವಾಸೋದ್ಯಮವನ್ನು (tourism) ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ಇಬ್ಬರ ನಡುವೆ ಗಂಭೀರ ಸಮಾಲೋಚನೆ ನಡೆದಿದೆ.
ಈ ವಿಶೇಷ ಭೇಟಿಯ ಸಂದರ್ಭದಲ್ಲಿ, ಪ್ರಮುಖವಾಗಿ ಕರಾವಳಿ ಹಾಗೂ ಮಲೆನಾಡಿನ ಅಪೂರ್ವ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಮತ್ತು ಅಲ್ಲಿನ ಪ್ರವಾಸಿ ತಾಣಗಳ ಮೂಲಸೌಕರ್ಯಗಳನ್ನು ವೃದ್ಧಿಸುವ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಇದರೊಂದಿಗೆ ಆ ಭಾಗದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಇರುವ ಅವಕಾಶಗಳನ್ನು ಹೆಚ್ಚಿಸುವುದು ಹಾಗೂ ಹೊಸ ನಿಯಮಾವಳಿಗಳನ್ನು ರೂಪಿಸುವ ಕುರಿತು ನಟ ರಿಷಬ್ ಶೆಟ್ಟಿ ಅವರು ಮುಖ್ಯಮಂತ್ರಿಗಳ ಗಮನ ಸೆಳೆದರು.
ಇದನ್ನೂ ಓದಿ : ಕರಾವಳಿ-ಮಲೆನಾಡು ಪ್ರವಾಸೋದ್ಯಮ ರಾಯಭಾರಿಯಾಗಿ ನಟ ರಿಷಬ್ ಶೆಟ್ಟಿ ನೇಮಕ
ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ ಸದಾ ಕಾರ್ಯನಿರತರಾಗಿರುವ ರಿಷಬ್ ಶೆಟ್ಟಿ ಅವರು, ಸಿನಿಮಾ ರಂಗದ ಜೊತೆಜೊತೆಗೇ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ತಮ್ಮ ಹೊಸ ಪ್ರವಾಸೋದ್ಯಮ ರಾಯಭಾರಿ ಹುದ್ದೆಗೆ ಪೂರಕವಾಗಿ ಅವರು ರಾಜ್ಯದ ನೈಸರ್ಗಿಕ ಸುಂದರ ತಾಣಗಳ ಏಳಿಗೆಗಾಗಿ ಶ್ರಮಿಸುತ್ತಿರುವುದು ಅವರ ಕಳಕಳಿಯನ್ನು ತೋರಿಸುತ್ತದೆ. ಈ ಸಭೆ ಕರಾವಳಿ ಮತ್ತು ಮಲೆನಾಡಿನ ಆರ್ಥಿಕ ಪ್ರಗತಿಗೂ ಹೊಸ ವೇಗ ನೀಡುವ ನಿರೀಕ್ಷೆಯಿದೆ.