ಸರಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ತಾತ್ಸಾರವಿದೆ. ಆದರೆ ಸರಕಾರಿ ಶಾಲೆಗಳಲ್ಲಿ ಓದಿದ ಮಕ್ಕಳೇ ಹೆಚ್ಚು ಪ್ರತಿಭಾವಂತರು ಎನ್ನುವುದು ಸಾಬೀತಾಗಿದೆ. ಆದ್ದರಿಂದ ಸರಕಾರಿ ಶಾಲೆಗಳನ್ನು ಬಲಪಡಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು ಎಂದು ಚಿತ್ರನಟ ರಿಷಬ್ ಶೆಟ್ಟಿ ಅಭಿಪ್ರಾಯ ಪಟ್ಟರು.
ಭಾನುವಾರ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಬ್ರಹ್ಮಣ್ಯ ನಗರದಲ್ಲಿ ನಿರ್ಮಿಸಿರುವ ನೂತನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಯ ದುಸ್ಥಿತಿ ಕುರಿತಾಗಿ ಸಿನಿಮಾ ನಿರ್ಮಿಸಿದ ಮಾತ್ರಕ್ಕೆ ನನ್ನ ಜವಾಬ್ದಾರಿ ಮುಗಿದಂತೆ ಅಲ್ಲ. ನಾನೂ ಸಹ ಸರ್ಕಾರಿ ಶಾಲೆಯಲ್ಲೇ ಓದಿದ ವಿದ್ಯಾರ್ಥಿಯಾಗಿದ್ದೇನೆ. ಸರ್ಕಾರಿ ಶಾಲೆಗಳನ್ನು ಉನ್ನತ ದರ್ಜೆಗೇರಿಸುವ ಕ್ರಮಕ್ಕೆ ನನ್ನ ಬೆಂಬಲವಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ “ಧರ್ಮವು ಉಳಿದರೆ ಮಾತ್ರ ರಾಷ್ಟ್ರವು ಉಳಿಯುತ್ತದೆ. ಕಳೆದ ಎಂಟು ವರ್ಷಗಳಲ್ಲಿ ಭಾರತದ ಶಕ್ತಿ ಏನೆಂದು ಜಗತ್ತಿಗೆ ಗೊತ್ತಾಗಿದೆ. ಎಂದರು.
ಸಚಿವ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯಿಸಿ, ನಾನು ಕೂಡ ಓರ್ವ ಶಿಕ್ಷಕರ ಮಗ. ಶಿಕ್ಷಣದ ಶಕ್ತಿ ಏನೆಂದು ನನಗೆ ಗೊತ್ತಿದೆ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಬೋಧನೆ ಮತ್ತು ಕಲಿಕೆಗೆ ಒತ್ತು ಕೊಡಲಾಗಿದೆ. ಡಿಜಿಟಲೀಕರಣಕ್ಕೆ ಆದ್ಯತೆ ಇದ್ದು, ಇಲ್ಲಿನ ಕಲಿಕೆಯು ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಎಂದರು .
ಮಲ್ಲೇಶ್ವರ ಬಿಜೆಪಿ ಮಂಡಲ ಅಧ್ಯಕ್ಷೆ ಕಾವೇರಿ ಕೇದಾರನಾಥ್, ಶಿಕ್ಷಣ ಫೌಂಡೇಶನ್ ಸಂಸ್ಥಾಪಕ ಪ್ರಸನ್ನ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.