ಬೆಂಗಳೂರು: ರಾಜ್ಯದ ಕರಾವಳಿ ತೀರವನ್ನು(Mangaluru) ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ರೂಪಿಸಲು ರಾಜ್ಯ ಸರ್ಕಾರ(karnataka Government) ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ವಿಧಾನಸೌಧದ(Vidhana Soudha) ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(CM.DK Shivakumar) ಅವರ ಅಧ್ಯಕ್ಷತೆಯಲ್ಲಿ‘ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಅತ್ಯಂತ ಮಹತ್ವದ ಉನ್ನತ ಮಟ್ಟದ ಸಮಾಲೋಚನೆ ಸಭೆ ಜರುಗಿತು. ಈ ಸಭೆಯಲ್ಲಿ ಖ್ಯಾತ ನಟ ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಕೂಡ ಭಾಗಿ ಆಗಿದ್ದರು. ಸಭೆಗೆ ರಿಷಬ್ ಶೆಟ್ಟಿ ಆಗಮಿಸುತ್ತಿದ್ದಂತೆ ಸಿಎಂ ಡಿಕೆ ಶಿವಕುಮಾರ್ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ಗೋವಾ – ಕೇರಳ ಮಾದರಿಯಲ್ಲಿ ಕರಾವಳಿ ಅಭಿವೃದ್ಧಿ
ಕರ್ನಾಟಕವು ಬರೋಬ್ಬರಿ 320 ಕಿಲೋ ಮೀಟರ್‌ಗಳಷ್ಟು ವಿಸ್ತಾರವಾದ ಕರಾವಳಿ ಭಾಗವನ್ನು ಹೊಂದಿದ್ದರೂ ಪ್ರವಾಸೋದ್ಯಮದಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಂಡಿಲ್ಲ. ಈ ಹಿನ್ನೆಲೆಯಲ್ಲಿ ನೆರೆಯ ಗೋವಾ ಹಾಗೂ ಕೇರಳ ರಾಜ್ಯಗಳ ಯಶಸ್ವಿ ಪ್ರವಾಸೋದ್ಯಮ ಮಾದರಿಯನ್ನು (Model) ಆಧರಿಸಿ, ನಮ್ಮ ಕರಾವಳಿ ತೀರವನ್ನು ಆರ್ಥಿಕ ಹಾಗೂ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳು ಈ ಸಭೆಯ ಮೂಲಕ ಬಿಗ್ ಪ್ಲಾನ್ ಕೈಗೆತ್ತಿಕೊಂಡಿದ್ದಾರೆ.
ಸಭೆಯಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಭಾಗಿ
ಈ ಮಹತ್ವದ ಸಮಾಲೋಚನೆ ಸಭೆಯಲ್ಲಿ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್, ಕರಾವಳಿ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ತಲುಪಿಸಿರುವ ಖ್ಯಾತ ಚಲನಚಿತ್ರ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಸತೀಶ್ ಸೈಲ್ ಭಾಗವಹಿಸಿ ಕರಾವಳಿ ಅಭಿವೃದ್ಧಿಯ ಕುರಿತು ತಮ್ಮ ಅಮೂಲ್ಯ ಸಲಹೆಗಳನ್ನು ಹಂಚಿಕೊಂಡರು.
ಉಳಿದಂತೆ ಆಡಳಿತಾತ್ಮಕವಾಗಿ ಯೋಜನೆಗಳನ್ನು ಜಾರಿಗೊಳಿಸುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀನಿವಾಸ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ತ್ರಿಲೋಕ್ ಚಂದ್ರ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳ ದಂಡೇ ಈ ಸಭೆಯಲ್ಲಿ ಉಪಸ್ಥಿತರಿದ್ದು, ನೀಲನಕ್ಷೆ ಸಿದ್ಧಪಡಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿತು. ಈ ಯೋಜನೆಯು ಮುಂದಿನ ದಿನಗಳಲ್ಲಿ ಕರಾವಳಿ ಭಾಗದ ಆರ್ಥಿಕತೆಗೆ ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಗೆ ಹೊಸ ದಿಕ್ಸೂಚಿಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ಕರಾವಳಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು, ಡಿಕೆಶಿ ಭರವಸೆ