ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಾವತ್ತೂರು ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಜನರು ಭಯ ಭಕ್ತಿ, ಶ್ರದ್ಧೆಯಿಂದ ಪೂಜಿಸಿ ಬರುತ್ತಿರುವ ಮಾವತ್ತೂರಮ್ಮ ದೇವಿ ಸಾನಿಧ್ಯದಲ್ಲೇ ಈ ಘಟನೆ ನಡೆದಿದೆ.
ಮಾವತ್ತೂರಮ್ಮ ದೇವಿಯ ಮೆರವಣಿಗೆ ನಡೆಯುತ್ತಿದ್ದಾಗ ಮಹಿಳೆಯೊಬ್ಬರು ವಿಚಿತ್ರವಾಗಿ ದೇವರು ಮೈಮೇಲೆ ಬಂದಂತೆ ಕುಣಿದಿದ್ದಾರೆ. ಮಾವತ್ತೂರಮ್ಮ ದೇವಿಯ ಮೆರವಣಿಗೆ ರಸ್ತೆಯಲ್ಲಿ ಸಾಗುತ್ತಿದ್ದಾಗ ಮೆರವಣಿಯಲ್ಲಿ ಪಾಲ್ಗೊಂಡಿದ್ದ ಮಹಿಳೆ ಕುಣಿಯಲು ಆರಂಭಿಸಿದ್ದಾಳೆ.
ಇದನ್ನು ನೋಡಿದ ದೇವಿಯ ಅರ್ಚಕ ನಾಗರಾಜು ಅವರು ಮಹಿಳೆಗೆ ಬೆತ್ತದಿಂದ ಹೊಡೆಯುತ್ತಾರೆ. ಈ ವೇಳೆ ಮಹಿಳೆ ಅರ್ಚಕರ ಕಾಲಿಗೆ ಬೀಳುತ್ತಾರೆ. ಮಹಿಳೆ ಕಾಲಿಗೆ ಬೀಳುತ್ತಿದ್ತೆ ಅರ್ಚಕ ಸ್ಥಳದಲ್ಲೇ ಕುಸಿದು ಬೀಳುತ್ತಾರೆ. ತಕ್ಷಣ ಅರ್ಚಕರನ್ನು ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರೂ ಮಾರ್ಗ ಮಧ್ಯೆ ನಾಗರಾಜು ಕೊನೆಯುಸಿರೆಳೆದಿದ್ದಾರೆ.
ಗ್ರಾಮದೇವತೆಯ ಕೊಂಡೋತ್ಸವ ನೆರವೇರುವ ಮುನ್ನ ಮೆರವಣಿಗೆಯಲ್ಲಿ ತೆರಳುತ್ತಿದ್ದ ಅರ್ಚಕ ಕುಸಿದು ಬಿದ್ದು ಮೃತಪಟ್ಟ ಕಾರಣ ದೇವಿಯ ಮೆರವಣಿಗೆ ಅರ್ಧಕ್ಕೆ ಸ್ಥಗಿತಗೊಳ್ಳುವಂತಾಗಿದೆ.