ಕೊಲ್ಕತ್ತಾ: ಆರ್‌ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್‌ಗೆ ಕೊಲ್ಕತ್ತಾದ ಸೀಲ್ಡಾ ಸಿವಿಲ್ ಮತ್ತು ಕ್ರಿಮಿನಲ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಇತ್ತ ಮೃತ ವೈದ್ಯೆಯ ಪೋಷಕರಿಗೆ ಸರ್ಕಾರ 10 ಲಕ್ಷ ಮತ್ತು 7 ಲಕ್ಷ ಪರಿಹಾರ ನೀಡಬೇಕೆಂದೂ ಸೂಚಿಸಿದೆ.
ಕರ್ತವ್ಯದಲ್ಲಿರುವಾಗ ಅತ್ಯಾಚಾರಕ್ಕೆ ಒಳಗಾಗಿದ್ದಕ್ಕೆ ಪಶ್ಚಿಮ ಬಂಗಾಳ ರಾಜ್ಯವು 7 ಲಕ್ಷ ರೂ. ಮತ್ತು ಕರ್ತವ್ಯದಲ್ಲಿರುವಾಗ ಸಾವನ್ನಪ್ಪಿದ್ದಕ್ಕೆ 10 ಲಕ್ಷ ರೂ. ಪರಿಹಾರವನ್ನು ಪಾವತಿಸಬೇಕಾಗುತ್ತದೆ ಎಂದು ಕೋರ್ಟ್ ಸೂಚಿಸಿದೆ. ನ್ಯಾಯಾಲಯದ ತೀರ್ಪು ಕೇಳಿ ಮೃತ ವೈದ್ಯೆಯ ಪೋಷಕರು, ನಮಗೆ ಪರಿಹಾರ ಬೇಡ, ನಮಗೆ ನ್ಯಾಯ ಬೇಕು ಕಣ್ಣೀರು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಡ್ಜ್, ನಿಮಗಾದ ನಷ್ಟವನ್ನು ನಾವು ಹಣದಿಂದ ಅಳೆಯುತ್ತಿಲ್ಲ. ಸರ್ಕಾರಿ ಆಸ್ಪತ್ರೆಯ ವೈದ್ಯೆಗೆ ಭದ್ರತೆ ಒದಗಿಸಬೇಕಾಗಿದ್ದುದು ಸರ್ಕಾರದ ಕರ್ತವ್ಯ. ಹೀಗಾಗಿ ಸರ್ಕಾರಕ್ಕೆ ನಾವು ವಿಧಿಸಿರುವ ದಂಡವಿದು ಎಂದು ಹೇಳಿದೆ.
ತಮ್ಮ ಮಗಳ ಮೇಲೆ ಪೈಶಾಚಿಕವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿದನಿಗೆ ಜೀವಾವಧಿ ಶಿಕ್ಷೆ ನೀಡಿರುವುದಕ್ಕೆ ವೈದ್ಯೆಯ ಪೋಷಕರು ಅಸಮಾಧಾನ ಹೊರಹಾಕಿದ್ದಾರೆ. ಆತನಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸಿರುವ ಅವರು ಅಂತಹ ಜನರಿಗೆ ಬದುಕುವ ಹಕ್ಕಿಲ್ಲ ಎಂದು ಹೇಳಿದ್ದಾರೆ. ಆದರೆ ಕೋರ್ಟ್ ಇಂದು ಮರಣದಂಡನೆ ವಿಧಿಸಲಿಲ್ಲ ಬದಲಾಗಿ ಜೀವಾವಧಿ ಶಿಕ್ಷೆ ವಿಧಿಸಿದೆ.