ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಆಯ್ದ ವಾರ್ಡ್‌ಗಳಲ್ಲಿ ಪ್ರತ್ಯೇಕವಾಗಿ ‘ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ’ (SIR) ನಡೆಸಲು ರಾಜ್ಯ ಚುನಾವಣಾ ಆಯೋಗ ಹೊರಡಿಸಿರುವ ಆದೇಶ ಈಗ ಹೈಕೋರ್ಟ್ (High Court) ಮೆಟ್ಟಿಲೇರಿದೆ. ಈ ಆದೇಶದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳಿಗೆ (Election Commission )ನೋಟಿಸ್ ಜಾರಿ ಮಾಡಿದೆ.
ಜೂನ್ 19 ರಂದು ರಾಜ್ಯ ಚುನಾವಣಾ ಆಯೋಗವು ಹೊರಡಿಸಿದ್ದ ಈ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ವಿವೇಕ್ ಸೇರಿದಂತೆ ಐವರು ನಾಗರಿಕರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ವೆಂಕಟೇಶ್ ದಳವಾಯಿ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
ಅರ್ಜಿದಾರರ ಪ್ರಮುಖ ಆಕ್ಷೇಪಗಳೇನು?
ಈಗಾಗಲೇ ಕೇಂದ್ರ ಚುನಾವಣಾ ಆಯೋಗವು ದೇಶಾದ್ಯಂತ ವ್ಯವಸ್ಥಿತವಾಗಿ ‘ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ’ (SIR) ಪ್ರಕ್ರಿಯೆಯನ್ನು ಹಮ್ಮಿಕೊಂಡಿದೆ. ಇದರ ನಡುವೆ ರಾಜ್ಯ ಆಯೋಗವು ಬೆಂಗಳೂರಿನ ಕೆಲವು ವಾರ್ಡ್‌ಗಳಿಗೆ ಮಾತ್ರ ಪ್ರತ್ಯೇಕವಾಗಿ ಮತ್ತೊಂದು ಸಮಾನಾಂತರ ಪ್ರಕ್ರಿಯೆ ಆರಂಭಿಸಿರುವುದು ಸಾರ್ವಜನಿಕರಲ್ಲಿ ತೀವ್ರ ಗೊಂದಲ ಮೂಡಿಸಲಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಜೂನ್ 26 ರಿಂದಲೇ ರಾಜ್ಯಾದ್ಯಂತ ಮನೆ ಮನೆ ಸಮೀಕ್ಷೆ ಕಾರ್ಯ ಅಧಿಕೃತವಾಗಿ ಚಾಲ್ತಿಯಲ್ಲಿದೆ. ಹೀಗಿರುವಾಗ ರಾಜ್ಯ ಆಯೋಗದ ಈ ಪ್ರತ್ಯೇಕ ನಿರ್ಧಾರವು ಕೇಂದ್ರದ ನಿರ್ದೇಶನಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಈ ವಿಷಯವಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ಕೋರಿದರು. ಇದನ್ನು ಪುರಸ್ಕರಿಸಿದ ನ್ಯಾಯಪೀಠವು, ಪ್ರಕರಣದ ಎಲ್ಲಾ ಪ್ರತಿವಾದಿಗಳಿಗೆ ಒಂದು ವಾರದ ಒಳಗಾಗಿ ಲಿಖಿತ ಆಕ್ಷೇಪಣೆ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೈಕೋರ್ಟ್ ಈ ಪ್ರಕರಣದ ಮುಂದಿನ ಸುದೀರ್ಘ ವಿಚಾರಣೆಯನ್ನು ಜುಲೈ 15 ಕ್ಕೆ ಮುಂದೂಡಿದೆ.
ಬೆಂಗಳೂರಿನ ಮತದಾರರ ಪಟ್ಟಿ ಪರಿಷ್ಕರಣೆಯ ಈ ವಿವಾದವು, ಮುಂಬರುವ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಗಳ ಅಧಿಕಾರ ವ್ಯಾಪ್ತಿ ಹಾಗೂ ಸಮನ್ವಯತೆಯ ಕುರಿತು ಕಾನೂನು ವಲಯದಲ್ಲಿ ಮಹತ್ವದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಇದನ್ನೂ ಓದಿ: CM VIJAY: ತಮಿಳುನಾಡು ಸಿಎಂ ವಿಜಯ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್, ಕಾರಣ ಏನು ?