ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ (Bengaluru) ಪ್ರತಿದಿನ ನರಕಯಾತನೆ ಅನುಭವಿಸುತ್ತಿರುವ ವಾಹನ ಸವಾರರಿಗೆ ಕೊಂಚ ನಿರಾಳ ತರಲು ರಾಜ್ಯ ಸರ್ಕಾರ (GBA) ಮುಂದಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ನಗರದ ಚಿತ್ರಣ ಬದಲಿಸಲು ಪಣ ತೊಟ್ಟಿರುವ ಕೃಷ್ಣ ಭೈರೇಗೌಡ (Krishna Byre Gowda) ಅವರು, ಈಗ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಬಿಗ್ ಪ್ಲಾನ್ ರೂಪಿಸಿದ್ದಾರೆ.
ಬಸ್ ನಿಲ್ದಾಣಗಳ ಬೇರೆಡೆಗೆ ಸ್ಥಳಾಂತರಿಸಲು ಸೂಚನೆ
ಫುಟ್‌ಪಾತ್ ಒತ್ತುವರಿ ತೆರವು ಹಾಗೂ ರಸ್ತೆಬದಿಯ ಬಿಡಾಡಿ ವಾಹನಗಳ ಎತ್ತಂಗಡಿಯಂತಹ ಸರಣಿ ಕ್ರಮಗಳ ಬೆನ್ನಲ್ಲೇ, ಇದೀಗ ಸಿಗ್ನಲ್‌ಗಳ ಸಮೀಪವಿರುವ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಜಂಕ್ಷನ್‌ಗಳಲ್ಲಿ ವಾಹನಗಳು ಸುಲಭವಾಗಿ ಚಲಿಸಲು ಅನುವಾಗುವಂತೆ ಟ್ರಾಫಿಕ್ ಸಿಗ್ನಲ್‌ಗಳಿಂದ ಕೇವಲ 75 ಮೀಟರ್ ವ್ಯಾಪ್ತಿಯೊಳಗೆ ಬರುವ ಎಲ್ಲಾ ಬಸ್ ನಿಲ್ದಾಣಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚಿಸಲಾಗಿದೆ.
27 ನಿಲ್ದಾಣಗಳ ಯಶಸ್ವಿ ಶಿಫ್ಟ್
ಇತ್ತೀಚೆಗೆ ಸಚಿವ ಕೃಷ್ಣ ಭೈರೇಗೌಡ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಸಂಚಾರ ಪೊಲೀಸರು ಸಚಿವರ ಸೂಚನೆಯನ್ನು ಜಾರಿಗೆ ತರಲು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಸಿಗ್ನಲ್ ಸಮೀಪವೇ ಬಸ್‌ಗಳು ನಿಲ್ಲುವುದರಿಂದ ಜಂಕ್ಷನ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿರುವುದನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಬಿಎಂಟಿಸಿ ಹಾಗೂ ಸಂಚಾರ ಪೊಲೀಸರು ಜಂಟಿಯಾಗಿ ನಗರದಾದ್ಯಂತ ಇಂತಹ ಒಟ್ಟು 103 ಬಸ್ ನಿಲ್ದಾಣಗಳನ್ನು ಗುರುತಿಸಿದ್ದರು. ಆ ಪೈಕಿ ಈಗಾಗಲೇ 27 ನಿಲ್ದಾಣಗಳನ್ನು ಯಶಸ್ವಿಯಾಗಿ ಶಿಫ್ಟ್ ಮಾಡಲಾಗಿದ್ದು, ಉಳಿದ 76 ನಿಲ್ದಾಣಗಳ ಸ್ಥಳಾಂತರ ಪ್ರಕ್ರಿಯೆಗೆ ಈಗ ವೇಗ ಸಿಕ್ಕಿದೆ.
ಬಾಕಿ ಉಳಿದಿರುವ ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸಲು ನೆರವಾಗುವಂತೆ ಸಂಚಾರ ಪೊಲೀಸರು ಜಿಬಿಎ (GBA) ಸಂಸ್ಥೆಗೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ. ಆದರೆ, ಮೂಲಸೌಕರ್ಯಗಳನ್ನು ಬದಲಿಸಲು ಜಿಬಿಎ ಅಧಿಕಾರಿಗಳು ಮೂರು ತಿಂಗಳ ಕಾಲಾವಕಾಶ ಕೋರಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆಗೆ, ಜಿಬಿಎ ವ್ಯಾಪ್ತಿಗೆ ಬರದ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ಸ್ಥಳೀಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಬಸ್ ನಿಲ್ದಾಣಗಳನ್ನೂ ಗುರುತಿಸಲಾಗಿದ್ದು, ಅವುಗಳನ್ನು ತೆರವುಗೊಳಿಸಲು ಆಯಾ ಇಲಾಖೆಗಳಿಗೆ ಅಧಿಕೃತ ಪತ್ರ ಬರೆದು ಸಮನ್ವಯ ಸಾಧಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಮಳೆಗಾಲದಲ್ಲೂ ಮೈಸುಡುವ ಬಿಸಿಲು, ಕರ್ನಾಟಕದಲ್ಲಿ ಜು.19ರವರೆಗೆ ತಾಪಮಾನ ಏರಿಕೆ!