ಗೌಹಾಟಿ: ಭೀಕರ ಪ್ರವಾಹದಿಂದ (Flood)ತೀವ್ರ ಸಂಕಷ್ಟಕ್ಕೆ ಈಡಾಗಿರುವ ಅಸ್ಸಾಂ (Assam) ರಾಜ್ಯದ ಪರಿಹಾರ ಕಾರ್ಯಗಳಿಗಾಗಿ ರಿಲಯನ್ಸ್ (Reliance ) ಇಂಡಸ್ಟ್ರೀಸ್ ಲಿಮಿಟೆಡ್ ಅತ್ಯಂತ ದೊಡ್ಡ ಮಟ್ಟದ ಆರ್ಥಿಕ ನೆರವು ಘೋಷಿಸಿದೆ.
ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಅಸ್ಸಾಂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹21 ಕೋಟಿ ದೇಣಿಗೆಯನ್ನು ನೀಡುವ ಮೂಲಕ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.
ಪ್ರಕೃತಿ ವಿಕೋಪದಿಂದಾಗಿ ರಾಜ್ಯದ ಹಲವು ಜಿಲ್ಲೆಗಳು ಜಲಾವೃತಗೊಂಡಿದ್ದು, ಲಕ್ಷಾಂತರ ಜನರು ತಮ್ಮ ಮನೆ-ಮಠಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಈ ಕಷ್ಟದ ಸಮಯದಲ್ಲಿ ರಿಲಯನ್ಸ್ ಸಂಸ್ಥೆಯು ನೀಡಿರುವ ದೊಡ್ಡ ಮೊತ್ತದ ದೇಣಿಗೆಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಂಕಷ್ಟದಲ್ಲಿರುವ ರಾಜ್ಯಕ್ಕೆ ಆಸರೆಯಾಗಿ ನಿಂತ ಮುಖೇಶ್ ಅಂಬಾನಿ ಅವರಿಗೆ ಅವರು ರಾಜ್ಯದ ಪರವಾಗಿ ಧನ್ಯವಾದ ಅರ್ಪಿಸಿದ್ದಾರೆ.
ಸಂಸ್ಥೆಯು ನೀಡಿದ ಈ ಪರಿಹಾರ ನಿಧಿಯನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಸಂತ್ರಸ್ತರಿಗೆ ತಕ್ಷಣವೇ ಆಹಾರ, ಕುಡಿಯುವ ನೀರು ಮತ್ತು ಔಷಧ ಸೇರಿದಂತೆ ತುರ್ತು ವೈದ್ಯಕೀಯ ಸಾಮಗ್ರಿಗಳನ್ನು ವಿತರಿಸಲು ಬಳಸಿಕೊಳ್ಳಲಾಗುವುದು. ಇದರೊಂದಿಗೆ, ಹಾನಿಗೊಳಗಾದ ರಸ್ತೆಗಳು ಮತ್ತು ಸೇತುವೆಗಳಂತಹ ಮೂಲಸೌಕರ್ಯಗಳ ಪುನರ್ನಿರ್ಮಾಣ ಕಾರ್ಯವನ್ನು ವೇಗಗೊಳಿಸಲು ಈ ನೆರವು ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಜ್ಯ ಸರ್ಕಾರಿ ಮೂಲಗಳು ತಿಳಿಸಿವೆ.
ರಿಲಯನ್ಸ್ ಫೌಂಡೇಶನ್ ಸಂಸ್ಥೆಯು ಕೇವಲ ಹಣಕಾಸಿನ ನೆರವು ನೀಡುವುದು ಮಾತ್ರವಲ್ಲದೆ, ಸ್ಥಳೀಯ ಆಡಳಿತದೊಂದಿಗೆ ಕೈಜೋಡಿಸಿ ಸಂತ್ರಸ್ತರಿಗೆ ನೇರ ಪರಿಹಾರ ಒದಗಿಸುವ ಕಾರ್ಯದಲ್ಲೂ ಭಾಗಿಯಾಗಿದೆ. ಸಂಕಷ್ಟದಲ್ಲಿರುವ ಜನರಿಗೆ ಅಗತ್ಯ ಮಾನವೀಯ ನೆರವು ನೀಡಲು ರಿಲಯನ್ಸ್ ಸಂಸ್ಥೆಯು ಯಾವಾಗಲೂ ಮುಂಚೂಣಿಯಲ್ಲಿರುತ್ತದೆ ಎಂಬುದಕ್ಕೆ ಈ ಕಾರ್ಯ ಮತ್ತೊಂದು ಸಾಕ್ಷಿಯಾಗಿದೆ.
ಇದನ್ನೂ ಓದಿ : ಭಾರಿ ಮಳೆಗೆ ಖಾಸಗಿ ಶಾಲೆಯ ಗೋಡೆ ಕುಸಿತ – ತಪ್ಪಿದ ಭಾರೀ ಅನಾಹುತ!