Monday, June 15, 2026
Homeಟಾಪ್ ನ್ಯೂಸ್RBI: ಆರ್‌ಬಿಐನಿಂದ ₹1 ಲಕ್ಷ ಕೋಟಿ ಮೌಲ್ಯದ ಚಿನ್ನ ಮಾರಾಟ?! ಊಹಾಪೋಹಗಳಿಗೆ ಬ್ರೇಕ್ ಹಾಕಿದ ಕೇಂದ್ರ...

RBI: ಆರ್‌ಬಿಐನಿಂದ ₹1 ಲಕ್ಷ ಕೋಟಿ ಮೌಲ್ಯದ ಚಿನ್ನ ಮಾರಾಟ?! ಊಹಾಪೋಹಗಳಿಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ!

ನವದೆಹಲಿ: ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸುಮಾರು 12 ಬಿಲಿಯನ್ ಯುಎಸ್ ಡಾಲರ್ (ಅಂದಾಜು 1 ಲಕ್ಷ ಕೋಟಿ ರೂಪಾಯಿಗೂ ಅಧಿಕ) ಮೌಲ್ಯದ ಬಂಗಾರವನ್ನು ಮಾರಾಟ ಮಾಡಿದೆ ಎಂಬ ಮಾಧ್ಯಮಗಳ ವರದಿಯನ್ನು ಕೇಂದ್ರ ಸರ್ಕಾರ (Central Government) ಮತ್ತು ಆರ್‌ಬಿಐ ಅಧಿಕೃತವಾಗಿ ತಳ್ಳಿಹಾಕಿವೆ. ಈ ರೀತಿಯ ಸುದ್ದಿಗಳು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತ ಎಂದು ಸ್ಪಷ್ಟಪಡಿಸಿರುವ ಆರ್‌ಬಿಐ, ದೇಶದ ಭೌತಿಕ ಚಿನ್ನದ ದಾಸ್ತಾನು ಸುರಕ್ಷಿತವಾಗಿದೆ ಎಂದು ಜನರಿಗೆ ಧೈರ್ಯ ತುಂಬಿದೆ.

ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಯಾದ ಬ್ಲೂಮ್‌ಬರ್ಗ್, ಪಶ್ಚಿಮ ಏಷ್ಯಾದ ಯುದ್ಧದ ವಾತಾವರಣ ಹಾಗೂ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಕುಸಿಯುತ್ತಿದ್ದ ರೂಪಾಯಿ ಮೌಲ್ಯವನ್ನು ಸ್ಥಿರಗೊಳಿಸಲು ಆರ್‌ಬಿಐ ಮೇ ತಿಂಗಳಿನಲ್ಲಿ ಭಾರಿ ಪ್ರಮಾಣದ ಚಿನ್ನವನ್ನು ಮಾರಾಟ ಮಾಡಿರಬಹುದು ಎಂದು ವರದಿ ಮಾಡಿತ್ತು.

ಈ ವರಸಿ ಸುಳ್ಳು ಎನ್ನುತ್ತಿದೆ ಫ್ಯಾಕ್ಟ್ ಚೆಕ್

ಮಾಧ್ಯಮಗಳಲ್ಲಿ ಈ ಊಹಾಪೋಹ ಹರಡುತ್ತಿದ್ದಂತೆ ಸಾರ್ವಜನಿಕರಲ್ಲಿ ಗೊಂದಲ ಮೂಡುವುದನ್ನು ತಡೆಯಲು ಕೇಂದ್ರ ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಇದರ ವಸ್ತುಸ್ಥಿತಿ ಪರಿಶೀಲನೆ (Fact-Check) ನಡೆಸಿದ್ದು, ಈ ವರದಿಯನ್ನು ಅಧಿಕೃತವಾಗಿ “ಫೇಕ್” (ಸುಳ್ಳು) ಎಂದು ಪ್ರಕಟಿಸಿದೆ.

ಆರ್‌ಬಿಐ ಬಿಡುಗಡೆ ಮಾಡಿರುವ ಪ್ರಕಟಣೆ ಹೀಗಿವೆ

  • ಸ್ಥಿರವಾದ ದಾಸ್ತಾನು: ಭಾರತದ ಒಟ್ಟು ಭೌತಿಕ ಚಿನ್ನದ ದಾಸ್ತಾನು ಪ್ರಸ್ತುತ 880.52 ಮೆಟ್ರಿಕ್ ಟನ್‌ಗಳಷ್ಟೇ ಇದ್ದು, ಅದರಲ್ಲಿ ಯಾವುದೇ ಕಡಿತವಾಗಿಲ್ಲ.
  • ಹೆಚ್ಚಿದ ಚಿನ್ನದ ಪಾಲು: ದೇಶದ ಒಟ್ಟು ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ (Forex Reserves) ಚಿನ್ನದ ಪಾಲು ಸೆಪ್ಟೆಂಬರ್ 2025 ರಲ್ಲಿ ಶೇ. 13.92 ರಷ್ಟಿತ್ತು. ಅದು ಮಾರ್ಚ್ 31, 2026 ರ ವೇಳೆಗೆ ಶೇ. 16.70 ಕ್ಕೆ ಮತ್ತು ಮೇ 22, 2026 ರ ವೇಳೆಗೆ ಶೇ. 16.85 ಕ್ಕೆ ನಿರಂತರವಾಗಿ ಏರಿಕೆಯಾಗಿದೆ.
  • ವಾರ್ಷಿಕ ವರದಿಯ ಪುರಾವೆ: ಆರ್‌ಬಿಐನ 2025-26ರ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಹಿಂದಿನ ವರ್ಷಕ್ಕೆ (879.58 ಮೆಟ್ರಿಕ್ ಟನ್) ಹೋಲಿಸಿದರೆ ಈ ಆರ್ಥಿಕ ವರ್ಷದಲ್ಲಿ ಚಿನ್ನದ ದಾಸ್ತಾನು 0.94 ಮೆಟ್ರಿಕ್ ಟನ್‌ನಷ್ಟು ಹೆಚ್ಚಾಗಿದೆಯೇ ಹೊರತು ಒಂದು ಗ್ರಾಂನಷ್ಟೂ ಕಡಿಮೆಯಾಗಿಲ್ಲ.

ಮೌಲ್ಯ ಕುಸಿತಕ್ಕೆ ಅಸಲಿ ಕಾರಣವೇನು?

ಮಾಧ್ಯಮಗಳ ತಪ್ಪು ಲೆಕ್ಕಾಚಾರಕ್ಕೆ ಮುಖ್ಯ ಕಾರಣವಾಗಿದ್ದು ಆರ್‌ಬಿಐನ ಫಾರೆಕ್ಸ್ ಮಾರುಕಟ್ಟೆಯಲ್ಲಾದ ಅಂಕಿ-ಅಂಶಗಳ ಬದಲಾವಣೆ. ಮೇ 8 ರಂದು ಸುಮಾರು 120 ಬಿಲಿಯನ್ ಡಾಲರ್‌ನಷ್ಟಿದ್ದ ಆರ್‌ಬಿಐ ಚಿನ್ನದ ದಾಸ್ತಾನಿನ ಒಟ್ಟು ಮೌಲ್ಯವು, ಮೇ 22 ರ ವೇಳೆಗೆ 114.8 ಬಿಲಿಯನ್ ಡಾಲರ್‌ಗೆ ಇಳಿಕೆಯಾಗಿತ್ತು.

ಇನ್ನು, ಈ ಮೌಲ್ಯದ ಕುಸಿತವು ಚಿನ್ನವನ್ನು ಮಾರಾಟ ಮಾಡಿದ್ದರಿಂದ ಸಂಭವಿಸಿದ್ದಲ್ಲ. ಬದಲಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳಲ್ಲಿ ಉಂಟಾದ ಏರಿಳಿತಗಳು ಮತ್ತು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯದ ವ್ಯತ್ಯಾಸದಿಂದಾಗಿ ಡಿಜಿಟಲ್ ಮೌಲ್ಯ ಬದಲಾಗಿದೆಯೇ ಹೊರತು, ಬ್ಯಾಂಕಿನ ಬಳಿ ಇರುವ ಭೌತಿಕ ಚಿನ್ನದ ಪ್ರಮಾಣ ಯಥಾಸ್ಥಿತಿಯಲ್ಲಿದೆ.

ಭಾರತದ ಬಂಗಾರ ಎಲ್ಲಿದೆ?

ದೇಶದ ಒಟ್ಟು 880.52 ಮೆಟ್ರಿಕ್ ಟನ್ ಚಿನ್ನದಲ್ಲಿ, ಶೇಕಡಾ 77 ರಷ್ಟು ಭಾಗವನ್ನು ಭಾರತದ ಗಡಿಯ ಒಳಗೇ ಅತ್ಯಂತ ಸುರಕ್ಷಿತವಾಗಿ ಇಡಲಾಗಿದೆ. ಇನ್ನುಳಿದ ದಾಸ್ತಾನುಗಳನ್ನು ಅಂತರರಾಷ್ಟ್ರೀಯ ವ್ಯವಹಾರಗಳ ಸುಲಭ ನಿರ್ವಹಣೆಗಾಗಿ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್ (BIS) ಸಂಸ್ಥೆಗಳಲ್ಲಿ ಇರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ.

ಇಂತಹ ದೇಶದ ಆರ್ಥಿಕತೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳ ಕುರಿತು ಸಾರ್ವಜನಿಕರು ಮಾಧ್ಯಮಗಳ ಊಹಾಪೋಹಗಳನ್ನು ನಂಬಬಾರದು. ಕೇವಲ ಆರ್‌ಬಿಐ ನಿಯತಕಾಲಿಕವಾಗಿ ಬಿಡುಗಡೆ ಮಾಡುವ ಅಧಿಕೃತ ಬುಲೆಟಿನ್ ಹಾಗೂ ಮಾಹಿತಿಗಳನ್ನು ಮಾತ್ರ ಅವಲಂಬಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ಜನರಲ್ಲಿ ಮನವಿ ಮಾಡಿಕೊಂಡಿವೆ.

 ಇದನ್ನೂ ಓದಿ: ಹಣದುಬ್ಬರದ ಅಪಾಯಗಳ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯದ ಎಚ್ಚರಿಕೆ

ಹೆಚ್ಚಿನ ಸುದ್ದಿ

Change Language »
error: Content is protected !!