Tuesday, November 5, 2024
Homeಚುನಾವಣೆ 2023ಬಸವನಗುಡಿ ಕ್ಷೇತ್ರದಲ್ಲಿ ರವಿ ಸುಬ್ರಹ್ಮಣ್ಯಗೆ ಟಿಕೆಟ್ ಅನುಮಾನ?

ಬಸವನಗುಡಿ ಕ್ಷೇತ್ರದಲ್ಲಿ ರವಿ ಸುಬ್ರಹ್ಮಣ್ಯಗೆ ಟಿಕೆಟ್ ಅನುಮಾನ?

ಬೆಂಗಳೂರು: ಚುನಾವಣಾ ದಿನಾಂಕ ನಿಗದಿಯಾಗಿ ದಿನಗಳೇ ಕಳೆದಿದ್ರೂ ಬಿಜೆಪಿ ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಆದರೆ ತಡವಾದರೂ ಕೂಡಾ ಅರ್ಹ ಅಭ್ಯರ್ಥಿಗೆ ಅವಕಾಶ ನೀಡಬೇಕು ಎಂಬುದು ಬಿಜೆಪಿಯ ನಿರ್ಧಾರವಾಗಿದ್ದು ಸೂಕ್ತ ಅಭ್ಯರ್ಥಿಯನ್ನೇ ಕಣಕ್ಕಿಳಿಸೋದಾಗಿ ಬಿಜೆಪಿ ಮೂಲಗಳು ತಿಳಿಸಿವೆ

ರಾಜ್ಯದಲ್ಲಿ ಹಲವೆಡೆ ಅಚ್ಚರಿಯ ಅಭ್ಯರ್ಥಿಗಳಿಗೆ ಅವಕಾಶ ನೀಡೋದಾಗಿ ಹೇಳುತ್ತಿರುವ ಬಿಜೆಪಿ ಬೆಂಗಳೂರಿನ ಕೆಲ ಕ್ಷೇತ್ರಗಳಲ್ಲೂ ಬದಲಾವಣೆಯಾಗಲಿದೆ ಎಂದಿದ್ದು, ಪಕ್ಕಾ ಬಿಜೆಪಿಯ ಭದ್ರಕೋಟೆಯಾಗಿರುವ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲೂ ಈ ಬಾರಿ ಅಭ್ಯರ್ಥಿ ಬದಲಾವಣೆ ಸಾಧ್ಯತೆ ಇದೆ.

ರವಿ ಸುಬ್ರಹ್ಮಣ್ಯ ಕಳೆದ 3 ಬಾರಿ ಸತತವಾಗಿ ಬಸವನಗುಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಾಂಪ್ರದಾಯಿಕ ಮತಗಳ ಚಲಾವಣೆ ಹಾಗೂ ಬ್ರಾಹ್ಮಣ ಸಮುದಾಯದವರ ಭದ್ರ ಮತ ಬ್ಯಾಂಕ್ ಬಲದಿಂದ ರವಿ ಸುಬ್ರಹ್ಮಣ್ಯ ಗೆಲುವು ಸಾಧಿಸುತ್ತಿದ್ದಾರೆ.

ಆದರೆ ಪರಿವಾರ ರಾಜಕೀಯದ ಬಗ್ಗೆ ಟೀಕಿಸುವ ಬಿಜೆಪಿಗೆ ಮುಜುಗರದಿಂದ ತಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಇದ್ದು, ಈಗಾಗಲೇ ರವಿ ಸುಬ್ರಹ್ಮಣ್ಯ ಕುಟುಂಬದ ಸದಸ್ಯ ತೇಜಸ್ವಿ ಸೂರ್ಯ ಸಂಸದರಾಗಿ ಆಯ್ಕೆಯಾಗಿರೋದ್ರಿಂದ ಈ ಬಾರಿ ರವಿಗೆ ಟಿಕೆಟ್‌ ನೀಡದಿರಲು ಪಕ್ಷ ಚಿಂತಿಸಿದೆ ಎನ್ನಲಾಗಿದೆ.

ಅದಲ್ಲದೇ ಕೋವಿಡ್ ಸಂದರ್ಭದಲ್ಲಿ ವಾಕ್ಸಿನ್ ಹಂಚಿಕೆ ವಿಚಾರದಲ್ಲಿ ರವಿ ಸುಬ್ರಹ್ಮಣ್ಯ ಹಾಗೂ ತೇಜಸ್ವಿ ಸೂರ್ಯಗೆ ಹಣ ಸಂದಾಯವಾಗಬೇಕು ಎಂಬ ಆರೋಪವೂ ಕೇಳಿಬಂದಿತ್ತು. ಇದರಿಂದ ಬಿಜೆಪಿ ತೀವ್ರ ಮುಜುಗರಕ್ಕೀಡಾಗಿತ್ತು . ಇದೆಲ್ಲದನ್ನೂ ಗಮನದಲ್ಲಿಟ್ಟುಕೊಂಡು ಬಸವನಗುಡಿ ಕ್ಷೇತ್ರದಲ್ಲಿ ಈ ಬಾರಿ ಅಭ್ಯರ್ಥಿ ಬದಲಾವಣೆ ಖಚಿತ ಎನ್ನಲಾಗ್ತಿದೆ.

ಈ ಮಧ್ಯೆ ಬಸವನಗುಡಿ ಕ್ಷೇತ್ರದಿಂದ ಕಟ್ಟೆ ಸತ್ಯರವರ ಹೆಸರು ಬಲವಾಗಿ ಕೇಳಿಬಂದಿದ್ದು ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಸತತ 5 ಬಾರಿ ಪಾಲಿಕೆ ಸದಸ್ಯರಾಗಿ, ಬೆಂಗಳೂರು ಮೇಯರ್ ಆಗಿ ಕಾರ್ಯನಿರ್ವಹಿಸಿರುವ ಅನುಭವವಿರುವ ಕಟ್ಟೆ ಸತ್ಯ ಪಕ್ಕಾ ಬಿಜೆಪಿಗ. ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾದ್ದರಿಂದ ಬಸವನಗುಡಿ ಕ್ಷೇತ್ರಕ್ಕೆ ಇವರೇ ಸೂಕ್ತ ಆಯ್ಕೆ ಎನ್ನಲಾಗುತ್ತಿದೆ. ಕಳೆದ 40 ವರ್ಷಗಳಿಂದ ಬಿಜೆಪಿಗಾಗಿ ದುಡಿಯುತ್ತರುವುದನ್ನು ಪರಿಗಣಿಸಿರುವ ಪಕ್ಷ ಕಟ್ಟೆ ಸತ್ಯರವರಿಗೆ ಟಿಕೆಟ್ ನೀಡುವ ಸಾಧ್ಯತೆ ದಟ್ಟವಾಗಿದೆ.

ಹೆಚ್ಚಿನ ಸುದ್ದಿ

error: Content is protected !!