ಬೆಂಗಳೂರು: ಕನ್ನಡದ ನಟಿ ರನ್ಯಾ ರಾವ್ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿರುವಂತಹ ಪ್ರಕರಣ ಒಂದು ದೊಡ್ಡ ಕಳವಳಕಾರಿ ವಿಷಯವಾಗಿದೆ. ಅಕ್ರಮ ಕೆಲಸದ ಸಂದರ್ಭ ಅವರಿಗೆ ಪೊಲೀಸ್ ಅಧಿಕಾರಿಗಳೇ ಪ್ರೊಟೋಕಾಲ್ ನೀಡಿರುವುದು ಇಡೀ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಆಘಾತ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅಣ್ಣಾಮಲೈ, ಇಂತಹ ಕೇಸ್‌ಗಳಲ್ಲಿ ಗಣ್ಯ ವ್ಯಕ್ತಿಗಳೆಂದು ಕರೆಯಲ್ಪಡುವವರೇ ಆ ಸಮಸ್ಯೆಯ ಕೇಂದ್ರದಲ್ಲಿರುವುದಕ್ಕೆ ನನಗೆ ತುಂಬಾ ಬೇಸರವಾಗಿದೆ. ಇದು ನಮ್ಮನ್ನು ಇಡೀ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ಸದ್ಯ ಈಗಲಾದರೂ ನಾವು ಅವರನ್ನು ಹಿಡಿಯಲು ಸಾಧ್ಯವಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಸಮಾಧಾನ ವ್ಯಕ್ತಪಡಿಸಿದರು.
ಇಂತಹ ಪ್ರಕರಣಗಳಿಂದಾಗಿ ಸಾಮಾನ್ಯವಾಗಿ ಪ್ರಯಾಣಿಸುವ ಪ್ರತಿಯೊಬ್ಬರು ಕೂಡಾ ಅನುಮಾನಾಸ್ಪದವಾಗಿ ಕಾಣಿಸುತ್ತಾರೆ. ಈ ಕೇಸ್‌ಗೆ ಸಂಬಂಧಪಟ್ಟಂತೆ ಮುಕ್ತ ಹಾಗೂ ನ್ಯಾಯಯುತವಾಗಿಯೇ ತನಿಖೆ ನಡೆಯಲಿ. ಇದರ ಹಿಂದೆ ಯಾರೇ ಇದ್ದರೂ ಕಂಬಿ ಎಣಿಸಲೇ ಬೇಕು. ತನಿಖೆ ಪೂರ್ಣಗೊಳ್ಳುವವರೆಗೂ ನಾವೆಲ್ಲರೂ ಕಾಯೋಣ ಎಂದು ಅಣ್ಣಾಮಲೈ ಹೇಳಿದ್ದಾರೆ.