ಬೆಳಗಾವಿ: ನಾನು ಸರ್ಕಾರವನ್ನೇ ತೆಗೆದವನು.. ಯಾರಿಗೂ ಹೆದರೋ ಮಗ ಅಲ್ಲ.. ಅಂತೆಲ್ಲಾ ಮಾತಾಡಿದ್ದ ರಮೇಶ್ ಜಾರಕಿಹೊಳಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚನೆಯ ಸಾಧನೆ ನನ್ನದೇ ಎಂದು ಬೀಗುತ್ತಿದ್ರು.. ಇದನ್ನು ಬಿಜೆಪಿಯೂ ಸಂಭ್ರಮಿಸಿತ್ತು. ಆದ್ರೆ ಇದೀಗ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ಬಿಜೆಪಿಗೆ ದೊಡ್ಡ ತಲೆನೋವಾಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಅಧಿಪತ್ಯ ಸಾಧಿಸಬೇಕು ಎಂಬ ರಮೇಶ್ ಜಾರಕಿಹೊಳಿ ಪ್ರಯತ್ನವೇ ಇದೀಗ ಬಿಜೆಪಿಗೆ ತಲೆಬಿಸಿ ತಂದಿಟ್ಟಿದೆ. ಅಥಣಿ ಕ್ಷೇತ್ರಕ್ಕೆ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿರುವ ರಮೇಶ್ ಜಾರಕಿಹೊಳಿ ಇದೀಗ ಇಡೀ ಬೆಳಗಾವಿ ಕ್ಷೇತ್ರದ ಚುನಾವಣಾ ಉಸ್ತುವಾರಿ ನನಗೇ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರಂತೆ.
ಮೊದಮೊದಲು ಅಥಣಿ,ಅರಭಾವಿ,ಹುಕ್ಕೇರಿ ಸೇರಿದಂತೆ 5 ಕ್ಷೇತ್ರಗಳ ಉಸ್ತುವಾರಿ ನೀಡುವಂತೆ ಬೇಡಿಕೆ ಇಟ್ಟಿದ್ದ ಜಾರಕಿಹೊಳಿ ಈಗ ಇಡೀ ಜಿಲ್ಲೆಯ ಉಸ್ತುವಾರಿ ಬೇಕು ಎಂದಿದ್ದಾರೆ. ಜಾರಕಿಹೊಳಿಯ ಈ ನಡೆಗೆ ಮೂಲ ಬಿಜೆಪಿಗರು ಕೆರಳಿ ಕೆಂಡವಾಗಿದ್ದಾರೆ, ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಸೇರಿದಂತೆ ಬೆಳಗಾವಿಯ ನಾಯಕರು ರಮೇಶ್ ಜಾರಕಿಹೊಳಿಗೆ ಉಸ್ತುವಾರಿ ನೀಡೋದಾದ್ರೆ ತಾವೆಲ್ಲಾ ಚುನಾವಣಾ ಚಟುವಟಿಕೆಯಿಂದ ದೂರು ಉಳಿಯುತ್ತೇವೆ ಎಂದು ಹೈಕಮಾಂಡ್‌ಗೆ ತಿಳಿಸಿದ್ದಾರಂತೆ.
ಈ ಎಲ್ಲಾ ಗೊಂದಲಗಳಿಂದ ಬಿಜೆಪಿ ಇಕ್ಕಟ್ಟಿಗೆ ಸಿಲುಕಿಬಿಟ್ಟಿದೆ. ಒಬ್ಬ ವಲಸಿಗನಿಂದ ಇಡೀ ಬೆಳಗಾವಿ ಬಿಜೆಪಿಯೇ ನಲುಗುವಂತಾಗಿದೆ ಅನ್ನೋದು ಬಿಜೆಪಿ ವಲಯದ ಮಾತು. ಇದು ಬೆಳಗಾವಿ ರಾಜಕಾರಣದ ಮೇಲೆ ಪರಿಣಾಮ ಬೀರುವುದು ನಿಶ್ಚಿತ ಎನ್ನಲಾಗುತ್ತಿದೆ.