Monday, June 15, 2026
Homeಕ್ರೈಂSHOCKING: ಹಸು ತರಕಾರಿ ಗಿಡ ಮೇಯ್ದಿದ್ದಕ್ಕೆ ಜಗಳ, ಪಕ್ಕದ ಮನೆಯವನ ಏಟಿಗೆ ಮಹಿಳೆ ಬ*ಲಿ!

SHOCKING: ಹಸು ತರಕಾರಿ ಗಿಡ ಮೇಯ್ದಿದ್ದಕ್ಕೆ ಜಗಳ, ಪಕ್ಕದ ಮನೆಯವನ ಏಟಿಗೆ ಮಹಿಳೆ ಬ*ಲಿ!

ರಾಮನಗರ: ಹಸುವೊಂದು (Cow) ತರಕಾರಿ ಗಿಡ ಮೇಯ್ದಿದ್ದನ್ನು ಪ್ರಶ್ನಿಸಿದ ಮಹಿಳೆಯ ಮೇಲೆ ಪಕ್ಕದ ಮನೆಯ ವ್ಯಕ್ತಿ ನಡೆಸಿದ ಮಾರಣಾಂತಿಕ ಹಲ್ಲೆ ಸಾವು-ಬದುಕಿನ ಹೋರಾಟದಲ್ಲಿದ್ದ ಮಹಿಳೆಯ ಸಾವಿಗೆ (Crime) ಕಾರಣವಾಗಿದೆ. ರಾಮನಗರದ (Ramnagara) ಬಾಲಗೇರಿಯಲ್ಲಿ ಜಯಮ್ಮ ಎಂಬ 55 ವರ್ಷದ ಮಹಿಳೆಯನ್ನು ಕಪಾಳಕ್ಕೆ ಹೊಡೆದು ಕೊಂದ ಆರೋಪಿ ಶ್ರೀನಿವಾಸ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಮೃತ ಜಯಮ್ಮ ತಮ್ಮ ಮನೆಯ ಆವರಣದ ಪಕ್ಕದಲ್ಲಿ ಬೆಳೆಸಿದ್ದ ತರಕಾರಿ ಗಿಡಗಳ ತೋಟಕ್ಕೆ ಶ್ರೀನಿವಾಸ್‌ಗೆ ಸೇರಿದ ಹಸು ನುಗ್ಗಿ ಇಡೀ ಬೆಳೆಯನ್ನು ಮೇದು ಹಾಕಿತ್ತು. ಇದನ್ನು ಪ್ರಶ್ನಿಸಲು ಹೋದ ಜಯಮ್ಮ ಮತ್ತು ಶ್ರೀನಿವಾಸ್ ಕುಟುಂಬಸ್ಥರ ನಡುವೆ ತೀವ್ರ ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರಿದಾಗ ಆಕ್ರೋಶಗೊಂಡ ಶ್ರೀನಿವಾಸ್, ಜಯಮ್ಮ ಅವರ ಕಪಾಳಕ್ಕೆ ಬಲವಾಗಿ ಹೊಡೆದಿದ್ದಾನೆ.

ವೇಳೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಜಯಮ್ಮನನ್ನು ತಕ್ಷಣವೇ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ಬಲವಾದ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಜಯಮ್ಮ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಜಯಮ್ಮ ಅವರ ಕುಟುಂಬಸ್ಥರ ದೂರಿನ ಮೇರೆಗೆ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅಪ್ಪನಲ್ಲ ರೀ ಅಸುರ! : ಊಟ ಸಿಲುಕಿ ಮಗು ಸಾವನ್ನಪ್ಪಿದೆ ಎಂದಿದ್ದ ಪಾಪಿ ತಂದೆಯ ನೀಚತನ ಬಯಲು!

ಕೇರಳ: ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ ಮಗು ಮೃತಪಟ್ಟಿದೆ ಎನ್ನಲಾಗಿದ್ದ ಪ್ರಕರಣದಲ್ಲಿ, ಕಳೆದ ಮೂರು ತಿಂಗಳಿನಿಂದ ಮಗುವಿನ ಮೇಲೆ ನಡೆದಿದ್ದ ಭೀಕರ ದೈಹಿಕ ದೌರ್ಜನ್ಯ ಹಾಗೂ ಕೊಲೆ  ಸಂಚಿನ ರಹಸ್ಯ ಈಗ ಬಯಲಾಗಿದೆ.

ಹೊಡೆದುಕೊಂದ ಸಾಕುತಂದೆ
ಕೇವಲ ಒಂದೂವರೆ ವರ್ಷದ ಕಂದಮ್ಮ ಆರ್ಶಿದ್‌ ಎಂಬ ಮಗುವನ್ನು ಆತನ ಸಾಕುತಂದೆ ಹೊಡೆದು ಕೊಂದಿದ್ದು, ಹೆತ್ತ ತಾಯಿ ಮೂಕಪ್ರೇಕ್ಷಕಳಾಗಿ ನಿಂತಿದ್ದಳು ಎನ್ನಲಾಗಿದೆ. ಈ ಘೋರ ಘಟನೆಯು ಕೇರಳದ ರಾಜಧಾನಿ ತಿರುವನಂತಪುರಂನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ನೆಡುಮಂಗಾಡ್‌ನ ಪಾನವೂರಿನಲ್ಲಿ ಸಂಭವಿಸಿದ್ದು, ಜನರಲ್ಲಿ ಸಂಚಲನ ಮೂಡಿಸಿದೆ.

ಏನಿದು ಘಟನೆ?
ಕಳೆದ ಮೇ 29 ರ ಸಂಜೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗು ಆರ್ಶಿದ್‌ನನ್ನು ಸಾಕುತಂದೆ ಅಶ್ಕರ್ ಪಾನವೂರಿನ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದ, ನಂತರ ಅಲ್ಲಿಂದ ಶ್ರೀ ಅವಿಟ್ಟಂ ತಿರುನಾಳ್ (SAT) ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿಗೆ ಅಶ್ಕರ್, ಮಗುವಿಗೆ ಆಹಾರ ಗಂಟಲಿನಲ್ಲಿ ಸಿಲುಕಿದ್ದರಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಎಂದು ಸುಳ್ಳು ಕಥೆ ಕಟ್ಟಿದ್ದ. ಆದರೆ ಮಗುವಿನ ಸಾವಿನ ಬಗ್ಗೆ ಆತನ ಸಂಬಂಧಿಕರು ತೀವ್ರ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಮಗುವಿನ ಶವಪರೀಕ್ಷೆ ನಡೆಸಿದಾಗ ನಿರಂತರ ಹಲ್ಲೆಯಿಂದಾಗಿ ಆಂತರಿಕ ರಕ್ತಸ್ರಾವವಾಗಿ ಮಗು ಮೃತಪಟ್ಟಿರುವುದು ದೃಢಪಟ್ಟಿದೆ.

ಮಗುವಿನ ದೇಹದ ಮೇಲೆ 51 ಗಾಯಗಳು
ಮಗುವಿನ ಇಡೀ ದೇಹದ ಮೇಲೆ ಬರೋಬ್ಬರಿ 51 ಗಾಯಗಳಿರುವುದು ಪತ್ತೆಯಾಗಿದ್ದು, ಜನನಾಂಗಕ್ಕೆ ತೀವ್ರ ಗಾಯಗಳಾಗಿದ್ದವು ಮತ್ತು ಕಾಲುಗಳ ಮೇಲೆ ಸಿಗರೇಟ್‌ನಿಂದ ಸುಟ್ಟ ಗಾಯದ ಗುರುತುಗಳಿದ್ದವು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ನೆಡುಮಂಗಾಡ್ ಪೊಲೀಸರು ಮೇ 30ರ ರಾತ್ರಿ ಮಗುವಿನ ತಾಯಿ, 21 ವರ್ಷದ ಅಖಿಲಾ ಮತ್ತು ಆಕೆಯ ಲಿವ್-ಇನ್ ಪಾರ್ಟ್‌ನರ್ ಅಶ್ಕರ್‌ನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸೋಮವಾರ ಪೊಲೀಸರು ಆರೋಪಿ ಅಶ್ಕರ್‌ನನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ಪ್ರಕ್ರಿಯೆ ನಡೆಸಿದಾಗ ಕೊಲೆಗೆ ಬಳಸಿದ ಕೋಲು ಮತ್ತು ಮಗುವನ್ನು ಸುಡಲು ಬಳಸಿದ ಲೈಟರ್ ಪತ್ತೆಯಾಗಿದೆ. ವಿಚಾರಣೆ ವೇಳೆ ತನ್ನ ತಪ್ಪು ಒಪ್ಪಿಕೊಂಡಿರುವ ಅಶ್ಕರ್, ಅಖಿಲಾ ಜೊತೆಗಿನ ತನ್ನ ಮುಂದಿನ ಜೀವನಕ್ಕೆ ಈ ಮಗು ಅಡ್ಡಿಯಾಗಿದ್ದಾನೆ ಎಂದು ಭಾವಿಸಿ ಮೂರು ತಿಂಗಳ ಹಿಂದೆಯೇ ಆತನನ್ನು ಕೊಲ್ಲಲು ನಿರ್ಧರಿಸಿದ್ದಾಗಿ ಮತ್ತು ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಹಿಂಸೆ ನೀಡುತ್ತಿದ್ದಾಗಿ ಒಪ್ಪಿಕೊಂಡಿದ್ದಾನೆ. ಮೇ 29 ರಂದು ಮಗು ಜೋರಾಗಿ ಅತ್ತಾಗ ಅಶ್ಕರ್ ಆತನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಮಗು ಸತ್ತಿರುವುದನ್ನು ಖಚಿತಪಡಿಸಿಕೊಂಡು ಮನೆಯನ್ನು ಸ್ವಚ್ಛಗೊಳಿಸಿ ಸಾಕ್ಷ್ಯ ನಾಶಪಡಿಸಿ, ನಂತರ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಮಗುವಿನ ಕಿರುಚಾಟ ಹೊರಗೆ ಕೇಳಿಸದಂತೆ ಆತನ ಬಾಯಿಗೆ ಬಟ್ಟೆ ತುರುಕುತ್ತಿದ್ದು ಹಾಗೂ ಹಲ್ಲೆಗೆ ಬಳಸಿದ ವಸ್ತುಗಳನ್ನು ಕಾಲುವೆಗೆ ಎಸೆದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

ಈ ಘಟನೆ ನಡೆಯುವ ಸುಮಾರು ಒಂದು ತಿಂಗಳ ಹಿಂದೆಯೇ ಮಗುವಿನ ಎರಡೂ ಕೈಗಳು ಮುರಿದಿದ್ದವು. ಆ ಬಗ್ಗೆ ನೆರೆಹೊರೆಯವರು ಪ್ರಶ್ನಿಸಿದಾಗ ಮಗು ಸೈಕಲ್‌ನಿಂದ ಬಿದ್ದಿದ್ದಾನೆ ಎಂದು ಅಶ್ಕರ್ ಸುಳ್ಳು ಹೇಳಿದ್ದ. ತಾಯಿ ಅಖಿಲಾ ಕೂಡ ಮಗುವಿನ ಕೈಗೆ ಪ್ಲಾಸ್ಟರ್ ಹಾಕಿರುವ ಫೋಟೋವನ್ನು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಳು. ಮಗು ಕೊಲೆಯಾಗುವ ಎರಡು ವಾರಗಳ ಮುನ್ನ ಬಸ್ ನಿಲ್ದಾಣದಲ್ಲಿ ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಒಬ್ಬರನ್ನು ಇವರು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ತೆಗೆದ ಚಿತ್ರದಲ್ಲೂ ಮಗುವಿನ ಎರಡೂ ಕೈಗಳಿಗೆ ಬ್ಯಾಂಡೇಜ್ ಇರುವುದು ಕಂಡುಬಂದಿದ್ದು, ಅಲ್ಲೂ ಸಹ ತಾಯಿ ಸೈಕಲ್‌ನಿಂದ ಬಿದ್ದಿದ್ದಾನೆ ಎಂದೇ ಸುಳ್ಳು ಹೇಳಿದ್ದಳು. ಪೊಲೀಸರ ತನಿಖೆ ವೇಳೆ ತಾಯಿ ಅಖಿಲಾ ತನ್ನ ಪ್ರಿಯಕರ ಮಗುವಿಗೆ ಕೋಲಿನಿಂದ ಬಡಿಯುತ್ತಿದ್ದಾಗ ಹಾಗೂ ಅಮಾನುಷವಾಗಿ ಹಿಂಸಿಸುತ್ತಿದ್ದಾಗ ತಾನು ಮೌನವಾಗಿ ನೋಡುತ್ತ ನಿಂತಿದ್ದೆ ಎಂದು ಒಪ್ಪಿಕೊಂಡಿದ್ದು, ಮಗುವನ್ನು ರಕ್ಷಿಸಲು ಯಾವುದೇ ಪ್ರಯತ್ನ ಮಾಡದಿರುವುದು ತಾಯಿತನಕ್ಕೇ ಕಪ್ಪುಚುಕ್ಕೆಯಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!