ರಾಹುಲ್ ಗಾಂಧಿ ಕಾನೂನಿಗಿಂತ ದೊಡ್ಡವರು ಎಂದು ಭಾವಿಸಿದ್ದಾರೆ, ಆದರೆ ಕಾನೂನು ತನ್ನ ಕೆಲಸ ಮಾಡಿದೆ, ದೇಶದಲ್ಲಿ ಯಾವುದೇ ವ್ಯಕ್ತಿ ಕಾನೂನಿಗಿಂತ ಮೇಲಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಬೆಂಗಳೂರಿನ ಹೊಸಕೆರೆಹಳ್ಳಿಯ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆಯೋಜಿಸಿದ್ದ ಯುವ ಸಂವಾದ ಕಾರ್ಯಕ್ರಮದಲ್ಲಿ ಇರಾನಿ ಭಾಗವಹಿಸಿದರು. ರಾಜ್ಯ ವಿಧಾನಸಭಾ ಚುನಾವಣೆಗೆ ಮೊದಲ ಬಾರಿ ಮತ ಚಲಾಯಿಸುವ ಯುವ ಮತದಾರರನ್ನು ಗುರಿಯಾಗಿಟ್ಟುಕೊಂಡು ಈ ಕಾರ್ಯಕ್ರಮವನ್ನು ಬಿಜೆಪಿ ನಡೆಸಿದೆ.
ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದು ಸರ್ಕಾರವೇ ಎಂಬಂತೆ ಬಿಂಬಿಸಲಾಗಿದೆ, ಆದರೆ, ಇದು ನ್ಯಾಯಾಲಯದ ತೀರ್ಪು ಎಂದು ಇರಾನಿ ಹೇಳಿದ್ದಾರೆ.
“ರಾಹುಲ್ ಒಬ್ಬ ವ್ಯಕ್ತಿಯ ವಿರುದ್ಧವಲ್ಲ, ಇಡೀ ಒಬಿಸಿ ಸಮುದಾಯದ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದಾರೆ. ಒಮ್ಮೆ ಶಿಕ್ಷೆಗೆ ಗುರಿಪಡಿಸಿದರೆ, ಸಾಂವಿಧಾನಿಕ ನಡೆಯನ್ನು ಅನುಸರಿಸುವುದು ಸದನದ ಸ್ಪೀಕರ್ ಕರ್ತವ್ಯವಾಗಿದೆ” ಎಂದು ರಾಹುಲ್ ಅನರ್ಹತೆಯನ್ನು ಸ್ಮೃತಿ ಇರಾನಿ ಸಮರ್ಥಿಸಿದ್ದಾರೆ.