ನವದೆಹಲಿ : ಬಿಹಾರದಲ್ಲಿ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಪರಿಷ್ಕರಿಸಿರುವುದನ್ನು ವಿರೋಧಿಸಿ ಮಂಗಳವಾರ ಕಾಂಗ್ರೆಸ್ ಮತ್ತಿತರ ಪಕ್ಷಗಳು ಮುಂಗಾರು ಅಧಿವೇಶನದ (Monsoon session) ಎರಡನೇ ದಿನ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸುತ್ತಿವೆ. ಕಾಂಗ್ರೆಸ್ (Congress) ಸಂಸದ ಹಾಗೂ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಪ್ರತಿಭಟನೆಯ ನೇತೃತ್ವ ವಹಿಸಿದ್ದು ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಲಾಗುತ್ತಿದೆ.
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಂಸತ್ ಭವನದ ಎದುರು ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ. ಯಾವುದೇ ಮಾನದಂಡವಿಲ್ಲದೇ ಲಕ್ಷಾಂತರ ಮಂದಿಯನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಅಲ್ಲದೇ ಚುನಾವಣೆಯನ್ನು ಗೆಲ್ಲಲು ಎನ್‌ಡಿಎ ಮೈತ್ರಿಕೂಟವು ಚುನಾವಣಾ ಅಕ್ರಮದ ಮಾರ್ಗಕ್ಕೆ ಇಳಿದಿದ್ದು, ಇದರಿಂದ ಜನಸಾಮಾನ್ಯರ ಮತದಾನದ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಟೀಕಿಸಿವೆ.
ಇಂದು ಮುಂಗಾರು ಅಧಿವೇಶನದ ಎರಡನೇ ದಿನವಾಗಿದ್ದು, ಅಧಿವೇಶನದಲ್ಲಿ ಬಿಹಾರ ಮತಪಟ್ಟಿ ಪರಿಷ್ಕರಣೆಯ ಬಗ್ಗೆ ಚರ್ಚೆ ನಡೆಸಲು ವಿಪಕ್ಷಗಳು ಮುಂದಾಗಿವೆ. ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ನಿತೀಶ್ ಕುಮಾರ್ ಹಾಗೂ ಮತ್ತಿತರರು ಸಂಚು ನಡೆಸಿ ಈ ಕೃತ್ಯ ನಡೆಸಿದ್ದು ಕೂಡಲೇ ಮತದಾರರ ಪರಿಷ್ಕರಣೆ ನಿಲ್ಲಿಸಿ ಈ ಮುಂಚಿನ ಎಲ್ಲಾ ಮತದಾರರಿಗೆ ಮತದಾನಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಲಾಗಿದೆ.
ಇದನ್ನೂ ಓದಿ: ಆ.11 ರಿಂದ ಕರ್ನಾಟಕ ಮುಂಗಾರು ಅಧಿವೇಶನ ಆರಂಭ
ಇನ್ನು ಈಗಾಗಲೇ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು ಮತದಾರರ ಪಟ್ಟಿಯಲ್ಲಿ ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಪ್ರಜೆಗಳ ಹೆಸರನ್ನು ಬೂತ್‌ಮಟ್ಟದ ಏಜೆಂಟ್‌ಗಳು ಪತ್ತೆಹಚ್ಚಿದ್ದಾರೆ. ವಿಚಾರಣೆ ಬಳಿಕ ಆ ಹೆಸರುಗಳನ್ನು ಅಂತಿಮ ಪಟ್ಟಿಯಿಂದ ಕೈಬಿಡಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಸೆಪ್ಟೆಂಬರ್ 30ರಂದು ಅಂತಿಮ ಮತದಾರರ ಪಟ್ಟಿಯಿಂದ ಅಕ್ರಮ ಮತದಾರರ ಹೆಸರು ಕೈಬಿಡಲಾಗುತ್ತದೆ.
ಈಗಿನ ಮತದಾರರ ಪಟ್ಟಿಯಲ್ಲಿ ಪತ್ತೆಯಾದ ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಪ್ರಜೆಗಳ ಹೆಸರುಗಳ ಕುರಿತಾದ ಯಾವುದೇ ಅಂಕಿಅಂಶಗಳನ್ನು ಚುನಾವಣಾ ಆಯೋಗದ ಮೂಲಗಳು ಒದಗಿಸಿಲ್ಲ.
ರಾಜ್ಯದ ನಿವಾಸಿಗಳ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದುಕ್ಕೆ 11 ದಾಖಲೆಗಳ ಪಟ್ಟಿಯನ್ನು ಚುನಾವಣಾ ಆಯೋಗ ಜೂನ್ 24ರಂದು ಪ್ರಕಟಿಸಿತ್ತು. ಈ ಪಟ್ಟಿಯು ಆಧಾರ್ ಕಾರ್ಡ್, ಎಪಿಕ್ ಮತ್ತು ಪಡಿತರಚೀಟಿ ಒಳಗೊಂಡಿರಲಿಲ್ಲ. ಹೀಗಾಗಿ, ಆಧಾರ್, ಎಪಿಕ್ ಹಾಗೂ ಪಡಿತರ ಚೀಟಿಗಳನ್ನು ಪರಿಗಣಿಸದೇ ಇರುವುದಕ್ಕೆ ಸೂಕ್ತ ಕಾರಣಗಳನ್ನು ನೀಡುವಂತೆ ಆಯೋಗಕ್ಕೆ ಸುಪ್ರೀಂ ಕೋರ್ಟ್ ಈಚೆಗೆ ಸೂಚಿಸಿತ್ತು.
ಇದರ ಬೆನ್ನಲ್ಲೇ ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಮಾಹಿತಿ ಸಂಗ್ರಹಿಸಲು ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಬಿಹಾರದಲ್ಲಿ ಸುಮಾರು 8 ಕೋಟಿ ಮತದಾರರಿದ್ದು, ಜುಲೈ 25ರವರೆಗೆ ತಮ್ಮ ಪೌರತ್ವ ಮತ್ತು ಜನ್ಮ ದಿನಾಂಕವನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.