ನವದೆಹಲಿ: ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಂಡ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ತಮ್ಮ ಮೊದಲ ಪತ್ರಿಕಾಗೋಷ್ಠಿ ನಡೆಸಿದ್ರು. ಅದಾನಿ ವಿರುದ್ಧ ದಾಖಲೆಗಳನ್ನು ನೀಡಿ ಸದನದಲ್ಲಿ ನಾನು ಮಾತನಾಡುತ್ತಿರುವುದರಿಂದ ಬಿಜೆಪಿ ಹೆದರಿದೆ. ಅದಾನಿ ಸ್ಕ್ಯಾಮ್ ಕುರಿತ ಸುದೀರ್ಘ ಚರ್ಚೆಗೆ ಅವಕಾಶ ಕೇಳಿದ್ದಕ್ಕಾಗಿ ಬಿಜೆಪಿಯವರು ಹೆದರಿ ನನ್ನನ್ನು ಅನರ್ಹಗೊಳಿಸಿದ್ದಾರೆ ಎಂದ್ರು.
ಎಲ್ಲರಿಗೂ ಮೋದಿ ಹಾಗೂ ಅದಾನಿಯವರ ಸಂಬಂಧದ ಬಗ್ಗೆ ತಿಳಿದಿದೆ. ಆದರೆ, ಅವರು ಆ ಬಗ್ಗೆ ಮಾತನಾಡಲು ಹೆದರುತ್ತಾರೆ. ನಾನು ಈ ದೇಶದ ಕಾನೂನನ್ನು ಗೌರವಿಸುತ್ತೇನೆ. ಹಾಗಾಗಿ ನನ್ನ ಅನರ್ಹತೆಯ ಬಗ್ಗೆ ಹೆಚ್ಚು ಹೇಳಲು ಬಯಸುವುದಿಲ್ಲ. ಆದರೆ, ನನ್ನ ನನ್ನ ಭಾಷಣಕ್ಕೆ ಹೆದರಿ ನನ್ನನ್ನು ಅನರ್ಹಗೊಳಿಸಿದ್ದಾರೆ. ಈ ವಿಷಯದಲ್ಲಿ ನಾನು ಎಲ್ಲ ವಿಪಕ್ಷದವರಿಗೆ ಧನ್ಯವಾದ ಹೇಳುತ್ತೇವೆ, ಅವರೆಲ್ಲಾ ಅದಾನಿ ವಿಷಯದಲ್ಲಿ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು.
ಭಾರತದ ಜನರ ಪ್ರಜಾಸತ್ತಾತ್ಮಕ ಧ್ವನಿಯನ್ನು ರಕ್ಷಿಸಲು ನಾನು ಇಲ್ಲಿದ್ದೇನೆ. ಅದನ್ನು ಮುಂದುವರಿಸುತ್ತೇನೆ. ಭಾರತದ ಪ್ರಜಾಪ್ರಭುತ್ವ ಕಾಪಾಡುವುದೇ ನನ್ನ ಉದ್ದೇಶ. ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿಗಳು ನಡೆಯುತ್ತಿವೆ, ಇದಕ್ಕೆ ಉದಾಹರಣೆ ಎಂಬಂತೆ ಕಾಲಕಾಲಕ್ಕೆ ಈ ರೀತಿಯ ಘಟನೆಗಳು ಪ್ರಕಟಗೊಳ್ಳುತ್ತಲೇ ಇರುತ್ತವೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ನಾನು ಅದಾನಿ ವಿಚಾರದಲ್ಲಿ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇನೆ. ಅವರು ನನ್ನನ್ನು ಅನರ್ಹಗೊಳಿಸುವ ಮೂಲಕ ಅಥವಾ ಜೈಲಿಗೆ ಹಾಕುವ ಮೂಲಕ ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ನಾನು ಹಿಂದೆ ಸರಿಯುವುದಿಲ್ಲ. ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧವೇನು? ಅವರು ನನ್ನ ಧ್ವನಿಯನ್ನು ನಿಲ್ಲಿಸಬಹುದು ಎಂದು ಭಾವಿಸಿದರೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.
ಬಿಜೆಪಿಯವರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಹಾಗೆಯೇ ನಾನು ಹೆದರುವಂತಹ ವ್ಯಕ್ತಿಯೂ ಅಲ್ಲ. ಭಾರತ್ ಜೋಡೊ ಯಾತ್ರೆಯಲ್ಲಿ ನಾನು ಸಮಾನತೆ ಬಗ್ಗೆ ಮಾತನಾಡಿದ್ದೇನೆ. ನಾನು ಎಂದಿಗೂ ಸತ್ಯವನ್ನೇ ಹೇಳುವವನು, ಇದಕ್ಕಾಗಿಯೇ ದೇಶದ ಜನರು ನನಗೆ ಬೆಂಬಲವಾಗಿ ನಿಂತಿದ್ದಾರೆ ಎಂದರು.