ರಾಹುಲ್ ಗಾಂಧಿ ಅದಾನಿ ಸಮೂಹದ ಬಗ್ಗೆ ಕೇಳಿದ ಪ್ರಶ್ನೆಗೆ ನರೇಂದ್ರ ಮೋದಿ ಬಳಿ ಉತ್ತರವಿಲ್ಲ, ಹಾಗಾಗಿ, ಅವರ ಸಂಸತ್ ಸ್ಥಾನವನ್ನು ಅನರ್ಹಗೊಳಿಸಲಾಗಿದೆ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
“ಅದಾನಿ ಮೇಲಿನ ಪ್ರಶ್ನೆಗೆ ನೀವು ಯಾಕೆ ಹೆದರುತ್ತೀರಿ? ಸಂಸತ್ತಿನಲ್ಲಿ ನಿಮಗೆ ಮೂರನೇ ಎರಡರಷ್ಟು ಬಹುಮತವಿದೆ, ಹಾಗಿದ್ರೂ ನೀವು ಯಾಕೆ ಹೆದರ್ತೀರಿ? ಇದರರ್ಥ ಏನೋ ಎಡವಟ್ಟಾಗಿದೆ” ಎಂದು ಖರ್ಗೆ ಹೇಳಿದರು.
ಕಪ್ಪು ಬಟ್ಟೆ, ಪಟ್ಟಿ ಕಟ್ಟಿ ಸಂಸತ್ತಿನ ಹೊರಗೂ ಒಳಗೂ ಪ್ರತಿಭಟನೆ ನಡೆಸಿದ ಕಾಂಗ್ರೆಸ್, ಇದು ಪ್ರಜಾಪ್ರಭುತ್ವದ ಕರಾಳ ದಿನ ಎಂದು ಹೇಳಿದೆ. ಇಂತಹ ಸಂಗತಿಗಳು ಹಿಂದೆ ಎಂದೂ ನಡೆದಿಲ್ಲ, ರಾಹುಲ್ ಅದಾನಿ ವಿರುದ್ಧ ಪ್ರಶ್ನೆ ಎತ್ತಲು ಆರಂಭಿಸಿದ ಮೇಲೆ ಈ ಸಂಗತಿಗಳು ನಡೆಯತೊಡಗಿದವು ಎಂದು ಖರ್ಗೆ ಹೇಳಿದರು. ಬಿಜೆಪಿ ಮತ್ತು ಮೋದಿ ಭಯಗೊಂಡಿದ್ದಾರೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಅನರ್ಹತೆಯ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಸೋಮವಾರ ಕಪ್ಪು ಬಟ್ಟೆ ಧರಿಸಿ ಬಂದಿದ್ದ ಕಾಂಗ್ರೆಸ್ ಸಂಸದರು ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ಜೆಪಿಸಿ ತನಿಖೆಗೆ ಒತ್ತಾಯಿಸಿ ವಿಜಯ್ ಚೌಕ್‌ಗೆ ಮೆರವಣಿಗೆ ನಡೆಸಿದರು.