ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಅವರ 56ನೇ ಜನ್ಮದಿನದ ಅಂಗವಾಗಿ, ಜೂನ್ 19ರಂದು ದೆಹಲಿಯ(Delhi) ತಾಲ್ಕಟೋರಾ ಸ್ಟೇಡಿಯಂನಲ್ಲಿ(Talkatora stadium) ಕಾಂಗ್ರೆಸ್(Congress) ಬೃಹತ್ ಉದ್ಯೋಗ ಮೇಳವನ್ನು(Job fair) ಆಯೋಜಿಸಿದೆ. ಭಾರತೀಯ ಯುವ ಕಾಂಗ್ರೆಸ್ ಮತ್ತು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಜೂನ್ 19ರ ಬೆಳಗ್ಗೆ 10 ಗಂಟೆಯಿಂದ ಉದ್ಯೋಗ ಮೇಳ ಆರಂಭವಾಗಲಿದೆ. ಈ ಮೇಳದಲ್ಲಿ ದೇಶದ ಪ್ರಮುಖ 150ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಹಾಗೂ ಸಂಸ್ಥೆಗಳು ಪಾಲ್ಗೊಳ್ಳಲಿವೆ.
ನೋಂದಣಿ ಮಾಡಿಕೊಳ್ಳುವುದು ಹೇಗೆ?
ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ನಿಗದಿಪಡಿಸಿದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನೇರವಾಗಿ ಭಾರತೀಯ ಯುವ ಕಾಂಗ್ರೆಸ್ ಜಾಲತಾಣಕ್ಕೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದರೊಂದಿಗೆ ಆಫ್‌ಲೈನ್ ನೋಂದಣಿ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಒಂದು ವೇಳೆ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದ ಯುವಕರು, ಜೂನ್ 19ರಂದು ನೇರವಾಗಿ ತಾಲ್ಕಟೋರಾ ಸ್ಟೇಡಿಯಂಗೆ ಭೇಟಿ ನೀಡಿ ಸ್ಥಳದಲ್ಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
10ನೇ ತರಗತಿ ಪಾಸಾದವರಿಂದ ಹಿಡಿದು ಸ್ನಾತಕೋತ್ತರ ಪದವಿ (ಪಿಜಿ) ಮುಗಿಸಿದ ಅಭ್ಯರ್ಥಿಗಳವರೆಗೆ ಎಲ್ಲರಿಗೂ ಇಲ್ಲಿ ಅವಕಾಶವಿದ್ದು, ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಕೌಶಲ್ಯಕ್ಕೆ ತಕ್ಕಂತೆ ಸಂದರ್ಶನಗಳನ್ನು ನಡೆಸಲಾಗುತ್ತದೆ. ಈ ಉದ್ಯೋಗ ಮೇಳಕ್ಕೆ ಯಾವುದೇ ರೀತಿಯ ನೋಂದಣಿ ಶುಲ್ಕ ಇರುವುದಿಲ್ಲ, ಇದು ಸಂಪೂರ್ಣ ಉಚಿತವಾಗಿದೆ.
ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿ ಸ್ಥಳದಲ್ಲೇ ಉದ್ಯೋಗ ಪತ್ರ (ಆಫರ್ ಲೆಟರ್) ನೀಡಲಾಗುತ್ತದೆ. ಅಲ್ಲದೆ, ಉದ್ಯೋಗ ಪತ್ರ ಪಡೆದ ನಂತರ ಕೆಲಸಕ್ಕೆ ಸೇರುವಾಗ ಎದುರಾಗುವ ಸಮಸ್ಯೆಗಳ ಪರಿಹಾರಕ್ಕಾಗಿ ಕಾಂಗ್ರೆಸ್ ಒಂದು ತಿಂಗಳ ಅವಧಿಗೆ ಸಹಾಯವಾಣಿ ಸಂಖ್ಯೆಯೊಂದನ್ನು ಸಕ್ರಿಯವಾಗಿಡಲಿದೆ.
ಉದ್ಯೋಗ ಮೇಳದ ಉದ್ದೇಶ:
ತಾವು ಕೇಂದ್ರದಲ್ಲಿ ಅಧಿಕಾರದಲ್ಲಿ ಇಲ್ಲದ ಕಾರಣ ಸರ್ಕಾರಿ ಕೆಲಸಗಳನ್ನು ನೀಡಲು ಸಾಧ್ಯವಾಗದಿದ್ದರೂ, ಖಾಸಗಿ ವಲಯದಲ್ಲಿ ಇರುವ ಉದ್ಯೋಗಾವಕಾಶಗಳನ್ನು ಉದ್ಯೋಗಾಕಾಂಕ್ಷಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಈ ಮೇಳದ ಮೂಲಕ ಮಾಡುತ್ತಿರುವುದಾಗಿ ಕಾಂಗ್ರೆಸ್ ತಿಳಿಸಿದೆ. ಕಳೆದ ವರ್ಷ ದೆಹಲಿಯಲ್ಲಿ ನಡೆದ ಮೇಳದಲ್ಲಿ 18,000 ಜನ ನೋಂದಾಯಿಸಿಕೊಂಡಿದ್ದು, ಅವರಲ್ಲಿ 7,000 ಜನರಿಗೆ ಕೆಲಸ ಸಿಕ್ಕಿತ್ತು. ಅದೇ ರೀತಿ ಜೈಪುರದಲ್ಲಿ 3,000 ಹಾಗೂ ಪಾಟ್ನಾದಲ್ಲಿ 10,000 ಯುವಕರು ಉದ್ಯೋಗ ಪಡೆದುಕೊಂಡಿದ್ದು, ಸರಾಸರಿ ಶೇ. 30ರಷ್ಟು ಯುವಕರು ಇಂತಹ ಮೇಳಗಳ ಮೂಲಕ ಉದ್ಯೋಗ ಕಂಡುಕೊಂಡಿದ್ದಾರೆ ಎಂದು ಪಕ್ಷದ ನಾಯಕರು ಮಾಹಿತಿ ನೀಡಿದ್ದಾರೆ.
ಒಂದು ಕಾಲದಲ್ಲಿ ದೇಶದ ಯುವಕರಿಗೆ ಉದ್ಯೋಗದ ತಾಣವಾಗಿದ್ದ ದೆಹಲಿಯಲ್ಲಿ, ಬಿಜೆಪಿ ಸರ್ಕಾರದ ತಪ್ಪು ನೀತಿಗಳಿಂದಾಗಿ ಸಣ್ಣ ಮತ್ತು ಗೃಹ ಕೈಗಾರಿಕೆಗಳು ನಶಿಸಿ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇಂದಿನ ದಿನಗಳಲ್ಲಿ ನಿರುದ್ಯೋಗ ಮತ್ತು ಹಣದುಬ್ಬರ ಎರಡೂ ಒಟ್ಟಿಗೆ ಹೆಚ್ಚುತ್ತಿದ್ದು, ಯುವಕರಲ್ಲಿ ಹೊಸ ಭರವಸೆ ಮೂಡಿಸಲು ಈ ಹೆಜ್ಜೆ ಇಟ್ಟಿರುವುದಾಗಿ ಹೇಳಿದೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ:
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕರು, ದೇಶದಲ್ಲಿ ನಿರುದ್ಯೋಗ ಮತ್ತು ಪರೀಕ್ಷಾ ಪೇಪರ್ ಸೋರಿಕೆ ಪ್ರಕರಣಗಳು ಹಿಂದೆಂದೂ ಕಾಣದ ಮಟ್ಟಿಗೆ ಹೆಚ್ಚಾಗಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ದೇಶದಲ್ಲಿ ಇದುವರೆಗೆ 90ಕ್ಕೂ ಹೆಚ್ಚು ಪೇಪರ್ ಲೀಕ್ ಪ್ರಕರಣಗಳು ನಡೆದಿದ್ದು, ವರ್ಷಗಟ್ಟಲೆ ಕಷ್ಟಪಟ್ಟು ಓದುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡಲಾಗುತ್ತಿದೆ ಎಂದು ದೂರಿದ್ದಾರೆ. ಈ ನಿಟ್ಟಿನಲ್ಲಿ ಪರೀಕ್ಷಾ ವ್ಯವಸ್ಥೆಯ ಪಾವಿತ್ರ್ಯತೆ ಕಾಪಾಡುವಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ ಎಂದಿರುವ ಕಾಂಗ್ರೆಸ್, ಇತ್ತೀಚೆಗೆ ಅಮೆರಿಕದ ನೌಕಾಪಡೆಯ ಹಡಗಿನಲ್ಲಿ ಮೂವರು ಭಾರತೀಯರು ಮೃತಪಟ್ಟ ದುರಂತದ ಸಮಯದಲ್ಲಿ ಪ್ರಧಾನಿ ಮೋದಿ ಅವರು ಸಂತ್ರಸ್ತರ ಪರವಾಗಿ ಧ್ವನಿ ಎತ್ತುವ ಬದಲು, ಅಮೆರಿಕಕ್ಕೆ ಧನ್ಯವಾದ ಹೇಳುವುದರಲ್ಲಿ ಬ್ಯುಸಿಯಾಗಿದ್ದರು ಎಂದು ಪ್ರಧಾನಿ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
✅ मेगा जॉब फेयर
🗓️ 19 जून, 2026
📍 तालकटोरा स्टेडियम, दिल्लीरजिस्टर करें: https://t.co/m5GMhwSdh9 pic.twitter.com/JYOrkIfH63
— Congress (@INCIndia) June 14, 2026
ಇದನ್ನೂ ಓದಿ: ಜೀವಿತಾವಧಿಯಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಿ- ಅಂಡಮಾನ್ ಸೌಂದರ್ಯಕ್ಕೆ ಮನಸೋತ ರಾಗಾ