ನವದೆಹಲಿ: ಮಾನನಷ್ಟ ಮೊಕದ್ದಮೆಯಲ್ಲಿಎರಡು ವರ್ಷ ಜೈಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂರತ್ ಸೆಷನ್ಸ್ ನ್ಯಾಯಾಲಯಕ್ಕೆ ಇಂದು ಮೇಲ್ಮನವಿ ಸಲ್ಲಿಸಲಿದ್ದಾರೆ.
ಮೋದಿ ಉಪನಾಮದ ಕುರಿತಾಗಿ ರಾಹುಲ್ ಗಾಂಧಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಸೂರತ್ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪಿನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಇಂದು ಮೇಲ್ಮನವಿ ಸಲ್ಲಿಸಲಿದ್ದಾರೆ. ರಾಹುಲ್ ಖುದ್ದಾಗಿ ನ್ಯಾಯಾಲಯಕ್ಕೆ ತೆರಳಿ, ಮೇಲ್ಮನವಿಯನ್ನು ಸಲ್ಲಿಸುವರು ಎಂದು ಪಕ್ಷದ ಮೂಲಗಳು ಹೇಳಿವೆ. ಪ್ರಕರಣ ಇತ್ಯರ್ಥವಾಗುವವರೆಗೆ ತಮಗೆ ನೀಡಲಾದ ಶಿಕ್ಷೆಗೆ ಮಧ್ಯಂತರ ತಡೆ ನೀಡುವಂತೆ ಕೋರುವ ಸಾಧ್ಯತೆ ಇದೆ. ನ್ಯಾಯಾಲಯ ಮಧ್ಯಂತರ ತಡೆ ನೀಡಿದರೆ ಮಾತ್ರ ಅವರ ಲೋಕಸಭಾ ಸದಸ್ಯತ್ವ ಉಳಿದುಕೊಳ್ಳಲಿದೆ. ಒಂದು ವೇಳೆ, ಸೆಷನ್ಸ್ ಅಥವಾ ಉನ್ನತ ನ್ಯಾಯಾಲಯದಿಂದ ಏಪ್ರಿಲ್ 22ರ ಒಳಗಾಗಿ ಯಾವುದೇ ಪರಿಹಾರ ಸಿಗದೇ ಇದ್ದಲ್ಲಿ, ರಾಹುಲ್ ಗಾಂಧಿ ಸೆರೆವಾಸ ಅನುಭವಿಸಬೇಕಾಗುತ್ತದೆ. ರಾಹುಲ್ ಅವರಿಗೆ ನ್ಯಾಯಾಲಯದಿಂದ ಶೀಘ್ರವೇ ಪರಿಹಾರ ಸಿಗಲಿದೆ. ಸಂಸದ ಸ್ಥಾನವೂ ಉಳಿಯಲಿದೆ ಎಂಬ ವಿಶ್ವಾಸವನ್ನು ಅವರ ವಕೀಲರ ತಂಡ ವ್ಯಕ್ತಪಡಿಸಿದೆ.
2019ರ ಲೋಕಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಕೋಲಾರದಲ್ಲಿ ಭಾಷಣ ಮಾಡಿ ‘ಎಲ್ಲ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ’ ಎಂದು ಪ್ರಶ್ನಿಸಿದ್ದರು. ಅದನ್ನು ಪ್ರಶ್ನಿಸಿ ಸೂರತ್ (ಪಶ್ಚಿಮ) ಕ್ಷೇತ್ರದ ಶಾಸಕ ಪೂರ್ಣೇಶ್ ಮೋದಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸೂರತ್ ನ್ಯಾಯಾಲಯ ರಾಹುಲ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಾರ್ಚ್ 23ರಂದು ತೀರ್ಪು ನೀಡಿತ್ತು.
ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲ ಅವಕಾಶ ನೀಡಿತ್ತು. ಜೈಲು ಶಿಕ್ಷೆ ಪ್ರಕಟಗೊಂಡ ಮರು ದಿನವೇ ರಾಹುಲ್ರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್, ದೇಶದ ವಿವಿಧೆಡೆ ವ್ಯಾಪಕ ಪ್ರತಿಭಟನೆಗಳನ್ನು ನಡೆಸಿತ್ತು. ಏ. 22ರ ಒಳಗಾಗಿ ಸರ್ಕಾರಿ ಬಂಗಲೆಯನ್ನು ತೊರೆಯುವಂತೆಯೂ ರಾಹುಲ್ ಅವರಿಗೆ ಸೂಚಿಸಲಾಗಿದೆ.