Monday, June 15, 2026
Homeಕ್ರೀಡೆR PRAGGNANANDHAA: ಕಾರ್ಲ್‌ಸನ್‌ಗೆ ಮತ್ತೆ ಶಾಕ್ ನೀಡಿದ ಪ್ರಜ್ಞಾನಂದ- ನಾರ್ವೆ ಚೆಸ್‌ನಲ್ಲಿ ಭಾರತದ ಯುವ ಆಟಗಾರನ...

R PRAGGNANANDHAA: ಕಾರ್ಲ್‌ಸನ್‌ಗೆ ಮತ್ತೆ ಶಾಕ್ ನೀಡಿದ ಪ್ರಜ್ಞಾನಂದ- ನಾರ್ವೆ ಚೆಸ್‌ನಲ್ಲಿ ಭಾರತದ ಯುವ ಆಟಗಾರನ ಐತಿಹಾಸಿಕ ಸಾಧನೆ

ನಾರ್ವೆ ಚೆಸ್ 2026ರ (Norway Chess 2026) ಟೂರ್ನಿಯಲ್ಲಿ ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ (R Praggnanandhaa) ಅವರು ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡುವ ಮೂಲಕ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಜಗತ್ತಿನ ನಂಬರ್ ಒನ್ ಆಟಗಾರ, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ (Magnus Carlsen) ಅವರಿಗೆ ಪ್ರಜ್ಞಾನಂದ ತವರೂರಿನಲ್ಲೇ ಸತತ ಎರಡನೇ ಬಾರಿ ಸೋಲಿನ ರುಚಿ ತೋರಿಸಿದ್ದಾರೆ.

ಕ್ಲಾಸಿಕಲ್ ಚೆಸ್ ಮಾದರಿಯಲ್ಲಿ ನಡೆದ ಈ ಪಂದ್ಯದಲ್ಲಿ ಕಾರ್ಲ್‌ಸನ್ ಅವರನ್ನು ಮಣಿಸಿದ ಪ್ರಜ್ಞಾನಂದ, ಈ ವರ್ಷ ಒಂದೇ ಟೂರ್ನಿಯಲ್ಲಿ ವಿಶ್ವದ ನಂಬರ್ ಒನ್ ಆಟಗಾರನನ್ನು ಎರಡು ಬಾರಿ ಸೋಲಿಸಿದ ಮೊದಲ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಂದ್ಯ ಮುಗಿದ ಬಳಿಕ ತೀವ್ರ ನಿರಾಶೆಗೊಂಡ ಕಾರ್ಲ್‌ಸನ್, ಯುವ ಭಾರತೀಯ ಆಟಗಾರನ ಚಾಣಾಕ್ಷ ನಡೆಗೆ ತಲೆದೂಗುತ್ತಾ ಕೈಕುಲುಕಿ ಬೇಸರದಿಂದಲೇ ಆಟದ ಕೋಣೆಯಿಂದ ಹೊರನಡೆದರು.

ಈ ಗೆಲುವಿನೊಂದಿಗೆ ಪ್ರಜ್ಞಾನಂದ ಅವರು ಒಟ್ಟು 12 ಅಂಕಗಳನ್ನು ಗಳಿಸಿ ಟೂರ್ನಿಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಈ ಸೋಲು ಕಾರ್ಲ್‌ಸನ್ ಅವರ 8ನೇ ನಾರ್ವೆ ಚೆಸ್ ಪ್ರಶಸ್ತಿ ಗೆಲ್ಲುವ ಕನಸಿಗೆ ಭಾರಿ ಹೊಡೆತ ನೀಡಿದೆ. ಇನ್ನು ಕೇವಲ ಎರಡು ಸುತ್ತುಗಳ ಆಟ ಬಾಕಿ ಉಳಿದಿದ್ದು, ಕಾರ್ಲ್‌ಸನ್ ಅವರ ಪ್ರಶಸ್ತಿ ರಕ್ಷಣೆ ಹಾದಿ ಕಠಿಣವಾಗಿದೆ.

ಮತ್ತೊಂದೆಡೆ, ಅಮೆರಿಕಾದ ವೆಸ್ಲಿ ಸೋ ಅವರು 14 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದರೆ, ಫ್ರಾನ್ಸ್‌ನ ಅಲಿರೆಜಾ ಫಿರೌಜ್ಜಾ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ, ಪ್ರಸ್ತುತ ವಿಶ್ವ ಚಾಂಪಿಯನ್ ಆಗಿರುವ ಭಾರತದ ಡಿ. ಗುಕೇಶ್ ಅವರಿಗೆ ಈ ಟೂರ್ನಿಯಲ್ಲಿ ಹಿನ್ನಡೆಯಾಗಿದ್ದು, ಫಿರೌಜ್ಜಾ ಎದುರು ಸೋಲು ಕಾಣುವ ಮೂಲಕ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದ್ದಾರೆ.

ಆದಾಗ್ಯೂ, ಪ್ರಜ್ಞಾನಂದ ಅವರ ಭರ್ಜರಿ ಫಾರ್ಮ್ ಭಾರತದ ಪ್ರಶಸ್ತಿಯ ಕನಸನ್ನು ಜೀವಂತವಾಗಿರಿಸಿದೆ. ವಿಶ್ವದ ದಿಗ್ಗಜನ ಕೋಟೆಯನ್ನು ಪುಡಿಪುಡಿ ಮಾಡಿರುವ ಪ್ರಜ್ಞಾನಂದ, ಮುಂದಿನ ಸುತ್ತುಗಳಲ್ಲಿ ಇನ್ನು ಹೆಚ್ಚಿನ ಒತ್ತಡದ ನಡುವೆ ಕಣಕ್ಕಿಳಿಯಲಿದ್ದು, ಇಡೀ ಚೆಸ್ ಲೋಕ ಅವರ ಮುಂದಿನ ನಡೆಗಳನ್ನು ಕುತೂಹಲದಿಂದ ಕಾಯುತ್ತಿದೆ.

ಇದನ್ನೂ ಓದಿ : ಇಂದಿನಿಂದಲೇ ರಾಜ್ಯಾದ್ಯಂತ ಮಳೆ ಶುರು – ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಹೆಚ್ಚಿನ ಸುದ್ದಿ

Change Language »
error: Content is protected !!