ಬೆಂಗಳೂರು: ವಿಧಾನಸಭೆಯ (Vidhana Sabha) ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashoka) ಅವರು ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನ್ಯಾಯಮೂರ್ತಿಗಳು 63% ಭ್ರಷ್ಟಾಚಾರದ ವಿಚಾರ ಪ್ರಕಟಿಸಿ ರಾಜ್ಯ ಸರಕಾರದ ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ. ನಿಮಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ವಿರುದ್ಧ 40% ಕಮಿಷನ್ ಎಂದು ಎಸ್‍ಐಟಿ ರಚನೆ ಮಾಡಿದ್ದೀರಲ್ಲವೇ? ಈಗ 63% ಭ್ರಷ್ಟಾಚಾರ ಸಂಬಂಧ ಯಾವ ಎಸ್‍ಐಟಿ ಮಾಡುತ್ತೀರಿ ಎಂದು ಪ್ರಶ್ನಿಸಿದ ಅಶೋಕ್, ನಿಮಗೆ ಧೈರ್ಯ ಇದ್ದರೆ ಸಿಬಿಐ ತನಿಖೆ ಮಾಡಿ ಎಂದು ಒತ್ತಾಯಿಸಿದರು. ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಭ್ರಷ್ಟಾಚಾರ ಇದೆ ಎಂಬುದು ಜಗಜ್ಜಾಹೀರಾಗಲಿ ಎಂದರು.
ಇದು 60%ರಷ್ಟು ಭ್ರಷ್ಟಾಚಾರದ ಸರಕಾರ ಎಂದು ಬಿಜೆಪಿ ಹೇಳಿತ್ತು. ಈ ಸರಕಾರವೇ ನೇಮಿಸಿದ ಉಪ ಲೋಕಾಯುಕ್ತ ನ್ಯಾಯಾಧೀಶರು ಇದನ್ನು ಹೇಳಿದ್ದಾರೆ. ವೇದಿಕೆಯಲ್ಲಿ ಎಲ್ಲರೂ ನ್ಯಾಯಮೂರ್ತಿಗಳು, ನ್ಯಾಯವಾದಿಗಳು ಕೂತಿದ್ದರು; ಕಮಿಷನ್ ಕೊಡದೇ ಇಲ್ಲೇನೂ ನಡೆಯುವುದಿಲ್ಲ; ಕರ್ನಾಟಕ ಭ್ರಷ್ಟಾಚಾರದಲ್ಲಿ 5ನೇ ಸ್ಥಾನದಲ್ಲಿದೆ ಎಂದಿದ್ದಾಗಿ ತಿಳಿಸಿದರು.
ಬೋವಿ ನಿಗಮದ ಅಧ್ಯಕ್ಷರೇ ಎಕರೆಗೆ 25 ಲಕ್ಷ ಕಮಿಷನ್ ಪಡೆಯುತ್ತಿದ್ದರು. ವಾಲ್ಮೀಕಿ ನಿಗಮದಡಿ 187 ಕೋಟಿ ಸುಮಾರು 700 ಖಾತೆಗೆ ವರ್ಗಾಯಿಸಲಾಗಿತ್ತು. ಅದನ್ನು ಬಳ್ಳಾರಿ ಚುನಾವಣೆಗೆ ಬಳಸಿದ್ದು, ತನಿಖೆ ನಡೆಯುತ್ತಿದೆ. ಸಚಿವರ ರಾಜೀನಾಮೆಯೂ ಆಗಿದೆ. ಮುಡಾ ಹಗರಣದಲ್ಲಿ 14 ನಿವೇಶನ ಲೂಟಿ ಹೊಡೆದು ಅದನ್ನು ವಾಪಸ್ ಕೊಟ್ಟಿದ್ದೀರಿ ಎಂದು ಕಿಡಿಕಾರಿದರು.
ಇದನ್ನೂ ಓದಿ : ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಇಲ್ಲಿದೆ
ಕರ್ನಾಟಕವು ಹೈಕಮಾಂಡಿನ ಎಟಿಎಂ ಆಗಿದೆ. ಸೋನಿಯಾ, ರಾಹುಲ್ ಗಾಂಧಿಯವರಿಗೆ ದುಡ್ಡು ಕೊಡುವವರಿಗಷ್ಟೇ ಇಲ್ಲಿ ಅಧಿಕಾರ ಎಂದು ಆರೋಪಿಸಿದ ಆರ್. ಅಶೋಕ್, ಯಾರು ಜಾಸ್ತಿ ಕೊಡುತ್ತಾರೋ ಅಧಿಕಾರದಲ್ಲಿ ಮುಂದುವರಿಯುತ್ತಾರೆ. ಮೊನ್ನೆ ಬಿಹಾರ ಚುನಾವಣೆಗೆ ಕರ್ನಾಟಕದಿಂದ ಸುಮಾರು 300 ಕೋಟಿ ಹಣ ಹೋಗಿದೆ. ಎಲ್ಲ ಸಚಿವರ ಬ್ರೇಕ್ ಫಾಸ್ಟ್ ಸಭೆ ನಡೆಸಿ 300 ಕೋಟಿ ಸಂಗ್ರಹಿಸಿ ಕೊಟ್ಟಿದ್ದಾರೆ. ಶಾಸಕ ಪಪ್ಪಿ 50 ಕೆಜಿ ಚಿನ್ನ ಇಟ್ಟಿದ್ದರು.್ಲವರು ಇನ್ನೂ ಜೈಲಲ್ಲೇ ಇದ್ದಾರೆ ಎಂದು ವಿವರಿಸಿದರು. ಕಾಂಗ್ರೆಸ್ ಮನೆದೇವರೇ ಭ್ರಷ್ಟಾಚಾರ ಎಂದು ಟೀಕಿಸಿದರು.
ಮುಡಾ 3 ಸಾವಿರ ಕೋಟಿ ಹಗರಣ ಆದಾಗ, ವಾಲ್ಮೀಕಿ ನಿಗಮದ ಹಗರಣ ನಡೆದಾಗ ನಾವು ದೊಡ್ಡ ಹೋರಾಟವನ್ನು ಮಾಡಿದ್ದೆವು. ಆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಪದೇಪದೇ ಭ್ರಷ್ಟಾಚಾರಕ್ಕೆ ಸಾಕ್ಷಿ ಕೊಡಿ ಎಂದು ಕೇಳುತ್ತಿದ್ದರು. ಈ ಸರಕಾರ 63%ರಷ್ಟು ಭ್ರಷ್ಟಾಚಾರ ಮಾಡುವ ಅಲಿಬಾಬಾ ಮತ್ತು 34 ಜನ ಕಳ್ಳರ ಸರಕಾರ ಎಂದು ಹಾಲಿ ಉಪ ಲೋಕಾಯುಕ್ತರೇ ಹೇಳಿದ್ದಾರೆ ಎಂದು ಗಮನ ಸೆಳೆದರು.