ಮಂಡ್ಯ: ರಾಜ್ಯದಲ್ಲಿ ತಲೆದೂರಿರುವ ಮಳೆ ಕೊರತೆ ಹಾಗೂ ನೀರಿನ ಅಭಾವದ ಹಿನ್ನೆಲೆಯಲ್ಲಿ, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ (R Ashok) ನೇತೃತ್ವದ ಬಿಜೆಪಿ ಹಿರಿಯ ನಾಯಕರ ತಂಡ ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ (KRS) ಜಲಾಶಯಕ್ಕೆ ಭೇಟಿ ನೀಡಿ ಜಲಮೂಲಗಳ ಸ್ಥಿತಿಗತಿಯನ್ನು ಪರಿಶೀಲಿಸಿದೆ.
ಮಳೆ ಸಂಪೂರ್ಣವಾಗಿ ಕೈಕೊಟ್ಟಿರುವ ಕಾರಣ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಕುಸಿದಿದ್ದು, ಸದ್ಯ ಕೇವಲ 80 ಅಡಿಗೆ ಬಂದು ತಲುಪಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರು ಜಲಾಶಯದ ಸದ್ಯದ ನೀರಿನ ಲಭ್ಯತೆ ಮತ್ತು ಸ್ಥಿತಿಗತಿಗಳ ಕುರಿತು ಅಲ್ಲಿದ್ದ ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಮೈಸೂರು-ಕೊಡಗು ಭಾಗದ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಕೆಆರ್‌ಎಸ್‌ನಲ್ಲಿ ಇರುವುದು ಕೇವಲ 2 ತಿಂಗಳ ನೀರು
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಆರ್. ಅಶೋಕ್, ಪ್ರಸ್ತುತ ಕರ್ನಾಟಕದ ಎಲ್ಲಾ ಪ್ರಮುಖ ಡ್ಯಾಂಗಳು ಸಂಪೂರ್ಣವಾಗಿ ಖಾಲಿ ಖಾಲಿಯಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯಗಳಲ್ಲಿ ಕಾಲು ಭಾಗದಷ್ಟು ನೀರೂ ಸಹ ಉಳಿದಿಲ್ಲ. ಕೆಆರ್‌ಎಸ್ ಡ್ಯಾಂನಲ್ಲಿ ಈಗ ಬಳಕೆಗೆ ಸಿಗುವಂತದ್ದು ಕೇವಲ 6 ಟಿಎಂಸಿ (TMC) ನೀರು ಮಾತ್ರ. ಆದರೆ, ನಮಗೆ ಕುಡಿಯುವ ನೀರಿಗಾಗಿಯೇ ತಿಂಗಳಿಗೆ ಕನಿಷ್ಠ 3 ಟಿಎಂಸಿ ನೀರು ಬೇಕಾಗುತ್ತದೆ. ಅಂದರೆ ಈಗ ಸಂಗ್ರಹವಿರುವ ನೀರು ಕೇವಲ ಮುಂದಿನ ಎರಡು ತಿಂಗಳಿಗೆ ಮಾತ್ರ ಸಾಕಾಗಬಹುದು, ಎಂದು ಆತಂಕ ವ್ಯಕ್ತಪಡಿಸಿದರು.
ಇಂದು ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟೆಗೆ ಭೇಟಿ ನೀಡಿ, ನೀರಿನ ಸಂಗ್ರಹ, ನಿರ್ವಹಣೆ ಹಾಗೂ ನೀರಾವರಿ ಪರಿಸ್ಥಿತಿಯ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದೆ.
ಬಳಿಕ ರೈತರೊಂದಿಗೆ ಮಾತುಕತೆ ನಡೆಸಿ, ಅವರ ಅಹವಾಲುಗಳು, ಆತಂಕಗಳು ಹಾಗೂ ನೀರಿನ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿದೆ. ರೈತರ ಮಾತುಗಳಲ್ಲಿ ವ್ಯಕ್ತವಾದ… pic.twitter.com/zWLC0IPE7h
— R. Ashoka (@RAshokaBJP) July 4, 2026
ಸಿಎಂ ಹೇಳಿಕೆಯನ್ನು ಖಂಡಿಸಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಲಾಶಯಗಳಲ್ಲಿ ನೀರಿಲ್ಲ, ಹಾಗಾಗಿ ರೈತರು ಯಾರೂ ಹೊಸದಾಗಿ ಬೆಳೆ ಬೆಳೆಯಬೇಡಿ ಎಂದು ಬೇಜವಾಬ್ದಾರಿಯ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರವೇ ಬೆಳೆ ಬೆಳೆಯಬೇಡಿ ಎಂದರೆ ನಮ್ಮ ಅನ್ನದಾತರು ಜೀವನ ನಡೆಸಲು ಕಡ್ಲೆಕಾಯಿ ತಿನ್ನಬೇಕಾ? ರೈತರ ಹಿತ ಕಾಯದ ಈ ಸರ್ಕಾರ, ಬೆಳೆ ಬೆಳೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಪ್ರತಿ ರೈತನಿಗೂ ತಕ್ಷಣವೇ ಎಕರೆಗೆ 50 ಸಾವಿರ ರೂಪಾಯಿಗಳ ವಿಶೇಷ ಬರ ಪರಿಹಾರ ನೀಡಬೇಕು, ಎಂದು ಆಗ್ರಹಿಸಿದರು.
ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಸರ್ಕಾರ ಮೌನ
ನೆರೆ ರಾಜ್ಯಕ್ಕೆ ನೀರು ಹರಿಸುವ ವಿಚಾರದಲ್ಲಿ ಸರ್ಕಾರದ ನಿಲುವನ್ನು ಪ್ರಶ್ನಿಸಿದ ವಿಪಕ್ಷ ನಾಯಕರು, ತಮಿಳುನಾಡಿಗೆ ಕಾವೇರಿ ನೀರು ಬಿಡುವ ಸೂಕ್ಷ್ಮ ವಿಚಾರ ಬಂದಾಗಲೆಲ್ಲಾ ರಾಜ್ಯ ಸರ್ಕಾರ ಸಂಪೂರ್ಣವಾಗಿ ಮೌನಕ್ಕೆ ಶರಣಾಗುತ್ತದೆ. ಈ ಹಿಂದೆ ಅಲ್ಲಿನ ಸಿಎಂ ಸ್ಟಾಲಿನ್ ಇದ್ದರು, ಈಗ ಹೊಸದಾಗಿ ಉದಯಿಸಿರುವ ಟಿವಿಕೆ (TVK) ಪಕ್ಷವೂ ಕಾಂಗ್ರೆಸ್‌ನ ಪಾರ್ಟ್ನರ್ (ಪಾಲುದಾರ) ಆಗಿದೆ. ರಾಜ್ಯದಲ್ಲಿ ಮಳೆ ಅಭಾವದ ಇಂತಹ ಅತ್ಯಂತ ಕಠಿಣ ಪರಿಸ್ಥಿತಿ ಎದುರಾಗಿದ್ದರೂ ಸಹ ಸರ್ಕಾರ ಇದುವರೆಗೆ ರೈತರ ಹಿತ ಕಾಯಲು ಯಾವುದೇ ರೈತ ಮುಖಂಡರ ಅಥವಾ ಸರ್ವಪಕ್ಷಗಳ ತುರ್ತು ಸಭೆಯನ್ನು ಕರೆದಿಲ್ಲ. ಆದರೆ, ಈ ಸರ್ಕಾರಕ್ಕೆ ಕಸದ ವಿಲೇವಾರಿ ಟೆಂಡರ್ ಹಾಗೂ ಬೆಂಗಳೂರಿನ ಟನಲ್ ರೋಡ್ ಟೆಂಡರ್ ಕರೆಯುವುದರಲ್ಲೇ ಆಸಕ್ತಿ ಹೆಚ್ಚಾಗಿದೆ, ಎಂದು ಲೇವಡಿ ಮಾಡಿದರು.
ದೆಹಲಿ ಹೈಕಮಾಂಡ್‌ಗೆ ಈ ಸರ್ಕಾರ ಎಟಿಎಂ
ರಾಜ್ಯದ ಆಡಳಿತ ವ್ಯವಸ್ಥೆಯ ಹಳಿತಪ್ಪಿರುವಿಕೆಯನ್ನು ಟೀಕಿಸಿದ ಅಶೋಕ್, ರಾಜ್ಯದ ಜನತೆ ಹಾಗೂ ರೈತರು ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಕೃಷಿ ಸಚಿವರಿಲ್ಲ. ಸರ್ಕಾರದ ಸಂಪುಟವೇ ಇನ್ನೂ ಪೂರ್ಣಗೊಂಡಿಲ್ಲ. ಕಾಂಗ್ರೆಸ್‌ನ ಆಕಾಂಕ್ಷಿ ಶಾಸಕರು ದೆಹಲಿಯ ಹೈಕಮಾಂಡ್ ನಾಯಕರಿಗೆ ಕೋಟ್ಯಂತರ ರೂಪಾಯಿ ದುಡ್ಡು ಕೊಟ್ಟು ಸಚಿವ ಸ್ಥಾನ ಪಡೆಯಲು ಕ್ಯೂ ನಿಂತು ಕಾಯುತ್ತಿದ್ದಾರೆ. ಪ್ರಸ್ತುತ ಕರ್ನಾಟಕದ ಈ ಕಾಂಗ್ರೆಸ್ ಸರ್ಕಾರವು ದೆಹಲಿ ನಾಯಕರ ಪಾಲಿಗೆ ಕೇವಲ ಹಣ ಲೂಟಿ ಮಾಡುವ ಎಟಿಎಂ (ATM) ಆಗಿ ಮಾರ್ಪಟ್ಟಿದೆ, ಎಂದು ಆರೋಪ ಮಾಡಿದರು.
ಇದನ್ನೂ ಓದಿ: ಎಸ್‌ಐಆರ್ ಅಕ್ರಮ ಆರೋಪ, ಮುಖ್ಯ ಚುನಾವಣಾಧಿಕಾರಿಗೆ ಬಿಜೆಪಿ ನಿಯೋಗ ದಾಖಲೆ ಸಹಿತ ದೂರು