Wednesday, August 19, 2026
Homeಟಾಪ್ ನ್ಯೂಸ್R ASHOK: ರೈತರ ಸಾಲ ಮನ್ನಾ ಮಾಡಿ! ಸಿಎಂ ಡಿ.ಕೆ. ಶಿವಕುಮಾರ್‌ಗೆ ಆರ್‌ ಅಶೋಕ್‌...

R ASHOK: ರೈತರ ಸಾಲ ಮನ್ನಾ ಮಾಡಿ! ಸಿಎಂ ಡಿ.ಕೆ. ಶಿವಕುಮಾರ್‌ಗೆ ಆರ್‌ ಅಶೋಕ್‌ ಬರೆದ ಪತ್ರದಲ್ಲಿ ಏನೆಲ್ಲಾ ಇದೆ ?

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಂಟಾಗಿರುವ ಅತಿವೃಷ್ಟಿ, ಪ್ರವಾಹ ಹಾಗೂ ಕೆಲವು ಭಾಗಗಳಲ್ಲಿ ಬರಗಾಲದಿಂದ ನಲುಗಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ತಕ್ಷಣವೇ ಧಾವಿಸಬೇಕು ಎಂದು ಆಗ್ರಹಿಸಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಪ್ರಕೃತಿ ವಿಕೋಪದಂತಹ ವಿಚಾರಗಳಲ್ಲೂ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿರುವ ಅವರು, ತಕ್ಷಣವೇ ಸಂಕಷ್ಟದಲ್ಲಿರುವ ರೈತರ ಕನಿಷ್ಠ 50,000 ರೂಪಾಯಿ ವರೆಗಿನ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪತ್ರದ ವಿವರ ಹಂಚಿಕೊಂಡಿರುವ ಆರ್‌ ಅಶೋಕ್‌, ರಾಜ್ಯದ ನೊಂದ ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಆಗ್ರಹಿಸಿದ್ದೇನೆ. ಪ್ರಕೃತಿ ವಿಕೋಪದ ಸಂದರ್ಭದಲ್ಲೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರ ಕೈಬಿಡಬೇಕು. ಅನ್ನದಾತರಿಗೆ ಈಗ ಬೇಕಾಗಿರುವುದು ಕೇವಲ ಆಶ್ವಾಸನೆಗಳಲ್ಲ, ತಕ್ಷಣದ ಪರಿಹಾರ ಎಂದು ಆಕ್ರೋಶ ಹೊರಹಾಕಿದ್ದಾರೆ.

ಆರ್. ಅಶೋಕ್ ಅವರ 6 ಪ್ರಮುಖ ಬೇಡಿಕೆ ಏನು ?
1. ರೈತರ ₹50,000 ಸಾಲ ಮನ್ನಾ
ಬರ ಮತ್ತು ಪ್ರವಾಹದಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ರಾಜ್ಯದ ಎಲ್ಲಾ ರೈತರಿಗೆ ಕನಿಷ್ಠ ₹50,000 ವರೆಗಿನ ಕೃಷಿ ಸಾಲಮನ್ನಾವನ್ನು ಸಿಎಂ ತಕ್ಷಣವೇ ಘೋಷಿಸಬೇಕು.
2. ಮಧ್ಯಂತರ ಪರಿಹಾರ ಬಿಡುಗಡೆ
ಸರ್ಕಾರದ ಬಳಿ ಲಭ್ಯವಿರುವ ಪ್ರಕೃತಿ ವಿಕೋಪ ನಿಧಿಯಿಂದ ತಕ್ಷಣವೇ ಸಂತ್ರಸ್ತ ರೈತರಿಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಬೇಕು. ಪ್ರಕ್ರಿಯೆಯಲ್ಲಿ ಸಾರ್ವಜನಿಕರು ವಂಚಿತರಾಗದಂತೆ ನೋಡಿಕೊಳ್ಳಬೇಕು.
3. ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ರಚನೆ
ರಾಜ್ಯದ ಪ್ರತಿ ತಾಲೂಕಿನಲ್ಲಿ ಸ್ಥಳೀಯ ಶಾಸಕರ ನೇತೃತ್ವದಲ್ಲೇ ವಿಶೇಷ ಟಾಸ್ಕ್ ಫೋರ್ಸ್ (Task Force) ರಚನೆ ಮಾಡಬೇಕು. ಆ ಮೂಲಕ ಬೆಳೆಹಾನಿ ಸಮೀಕ್ಷೆ, ಪರಿಹಾರ ವಿತರಣೆ ಮತ್ತು ಪುನರ್ವಸತಿ ಕಾರ್ಯಗಳ ಸಂಪೂರ್ಣ ಉಸ್ತುವಾರಿ ವಹಿಸಬೇಕು.

4. ಜಿಲ್ಲಾಧಿಕಾರಿಗಳಿಗೆ (DC) ತುರ್ತು ಅನುದಾನ
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ (PD) ಖಾತೆಗೆ ತಕ್ಷಣವೇ ತುರ್ತು ಅನುದಾನ ಬಿಡುಗಡೆ ಮಾಡಬೇಕು. ಈ ಮೂಲಕ ಸ್ಥಳೀಯ ಮಟ್ಟದ ಪರಿಹಾರ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡಬೇಕು.

5. ಬೆಳೆ ಹಾನಿ ಸಮೀಕ್ಷೆ ಚುರುಕು
ಪ್ರವಾಹ ಹಾಗೂ ಬರದಿಂದ ಆಗಿರುವ ಬೆಳೆಹಾನಿ ಸಮೀಕ್ಷೆಯನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಬೇಕು. ರಾಜ್ಯಕ್ಕೆ ಸಿಗಬೇಕಾದ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ (NDRF) ನೆರವನ್ನು ಪಡೆದುಕೊಳ್ಳಲು ತಕ್ಷಣವೇ ವರದಿ ಸಲ್ಲಿಸಬೇಕು.

6. ಜಿಲ್ಲಾ ಉಸ್ತುವಾರಿ ಸಚಿವರ ರೌಂಡ್ಸ್
ಜಿಲ್ಲಾ ಉಸ್ತುವಾರಿ ಸಚಿವರುಗಳು ಕೇವಲ ಬೆಂಗಳೂರಿನಲ್ಲಿ ಕೂರದೆ ತಕ್ಷಣವೇ ತಮ್ಮ ಉಸ್ತುವಾರಿ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು. ರೈತರ ಅಹವಾಲುಗಳನ್ನು ಖುದ್ದಾಗಿ ಆಲಿಸಿ ಸ್ಥಳದಲ್ಲೇ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕು.

ರಾಜ್ಯ ಸರ್ಕಾರವು ಕೇಂದ್ರದ ಮೇಲಿನ ರಾಜಕೀಯ ಪ್ರೇರಿತ ಆರೋಪಗಳನ್ನು ಬದಿಗಿಟ್ಟು, ತನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ತಾವು ನೀಡಿರುವ ರೈತರ ಸಾಲಮನ್ನಾ ಭರವಸೆಯನ್ನು ಈಡೇರಿಸಿ ಅನ್ನದಾತರ ನೆರವಿಗೆ ಧಾವಿಸಬೇಕು ಎಂದು ವಿಪಕ್ಷ ನಾಯಕರು ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ‘ಯಾವುದೇ ಕಾರಣಕ್ಕೂ ಭೂಮಿ ಕೊಡಲ್ಲ’: ಬಿಡದಿ ಟೌನ್‌ಶಿಪ್ ವಿರುದ್ಧ 15 ಜಿಲ್ಲೆಗಳ ರೈತರ ಮಹಾ ಸಂಗ್ರಾಮ; ಉಗ್ರ ಹೋರಾಟದ ಎಚ್ಚರಿಕೆ!

ಹೆಚ್ಚಿನ ಸುದ್ದಿ

Change Language »
error: Content is protected !!