ಧಾರವಾಡ: ಬೊಂಬೆ ಈ ಬಾರಿಯೂ ಭವಿಷ್ಯ ನುಡಿದಿದೆ. ನೂರಾರು ವರ್ಷಗಳ ಇತಿಹಾಸವಿರುವ ಧಾರವಾಡದ ಬೊಂಬೆ ಭವಿಷ್ಯ ಈ ಬಾರಿ ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದೆ.
ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿ ಗ್ರಾಮದ ಹನುಮನಕೊಪ್ಪ ಗ್ರಾಮಸ್ಥರು ಪ್ರತಿವರ್ಷ ಯುಗಾದಿ ಅಮವಾಸ್ಯೆಯಂದು ತಮ್ಮ ಗ್ರಾಮದ ತುಪ್ಪರಿ ಹಳ್ಳದಲ್ಲಿ ಈ ಆಚರಣೆ ಮಾಡ್ತಾರೆ. ಪ್ರತೀ ಬಾರಿಯೂ ಈ ಬೊಂಬೆ ಸತ್ಯವನ್ನೇ ನುಡಿಯುತ್ತೆ ಅಂತಾರೆ ಸ್ಥಳೀಯರು
ಈ ಊರಿನಾಚೆಯ ದಂಡೆಯ ಮೇಲೆ ಒಂದು ಕಲಾಕೃತಿ ಮಾಡಿ, ಅದರ ನಾಲ್ಕೂ ದಿಕ್ಕಿಗೆ ಬೊಂಬೆಗಳನ್ನು ಜೋಡಿಸಲಾಗುತ್ತೆ. ರಾಜಕಾರಣಿ,ರೈತರು, ಸೈನಿಕರು, ಆಳು ಹೀಗೆ ವಿವಿಧ ಬೊಂಬೆಗಳನ್ನು ಇರಿಸಲಾಗುತ್ತೆ. ಅಮಾವಾಸ್ಯೆಯಂದು ಈ ಬೊಂಬೆಗಳನ್ನಿಟ್ಟು ಹೋಗುತ್ತಾರೆ. ಮಾರನೆಯ ದಿನ ಬೆಳಿಗ್ಗೆ ಬೊಂಬೆಗಳನ್ನು ಗ್ರಾಮಸ್ಥರು ನೋಡುತ್ತಾರೆ. ಹೀಗೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಯಾವುದಾದರೊಂದು ಬೊಂಬೆಗೆ ಹಾನಿಯೋ ಅಥವಾ ಆಕೃತಿಯಲ್ಲಿ ಏನಾದರೂ ಬದಲಾವಣೆಯಾಗಿರುತ್ತೆ. ಯಾವ ಬೊಂಬೆಯ ಆಕೃತಿ ಹೇಗೆ ಬದಲಾಗಿದೆ ಎಂಬುದರ ಮೇಲೆ ಭವಿಷ್ಯವನ್ನು ಗ್ರಾಮಸ್ಥರು ವಿಮರ್ಷೆ ಮಾಡಿ ನಿರ್ಧರಿಸುತ್ತಾರೆ. ಈ ಬಾರಿ ರಾಜಕಾರಣದ ಬೊಂಬೆಯ ಕಾಲಿಗೆ ಪೆಟ್ಟಾಗಿದ್ದು ಇದನ್ನು ಕರ್ನಾಟಕದ ರಾಜಕೀಯ ಚಿತ್ರಣ ಬದಲಾಗಲಿದೆ ಎಂದು ಗ್ರಾಮಸ್ಥರು ವಿಶ್ಲೇಷಿಸಿದ್ದಾರೆ.
ಯಡಿಯೂರಪ್ಪ ಅಧಿಕಾರ ತ್ಯಾಗ ಮಾಡಿದ ಸಂದರ್ಭದಲ್ಲೂ ಹಾಗೂ ಇಂದಿರಾಗಾಂಧಿ ಹತ್ಯೆಯಾದ ವರ್ಷದಲ್ಲೂ ಈ ಬೊಂಬೆ ಭವಿಷ್ಯ ನಿಜವಾಗಿತ್ತು ಅಂತಾರೆ ಗ್ರಾಮಸ್ಥರು