ಪಿಎಸ್‍ಐ ನೇಮಕಾತಿಯಲ್ಲಿ ನಡೆದ ಅಕ್ರಮದ ತನಿಖೆಯ ವೇಳೆ ಸಿಐಡಿ ಪೊಲೀಸ್ ವಿಚಾರಣೆಗೆ ಒಳಗಾಗಿದ್ದ ನೆಲಮಾವು ಗಣಪತಿ ಭಟ್ ಆತ್ಮಹತ್ಯೆಗೆ ಶರಣಾಗಿ ಸಾವನ್ನಪ್ಪಿದ್ದಾರೆ. ಇವರು ಸಿದ್ದಾಪುರ ತಾಲೂಕಿನ ನೆಲೆಮಾವು ಸೇವಾ ಸಹಕಾರಿ ಸಂಘದ ಅಧ್ಯಕ್ಷರೂ ಸಹ ಆಗಿದ್ದರು.
ಬೆಂಗಳೂರಿನಿಂದ ಬಂದಿದ್ದ ಸಿಐಡಿ ತಂಡ ಪಿಎಸ್‍ಐ ನೇಮಕಾತಿ ಅಕ್ರಮದ ವಿಷಯದಲ್ಲಿ ಹೊಂದಿರುವ ಪಾತ್ರದ ಬಗ್ಗೆ ಗಣಪತಿ ಭಟ್ ರನ್ನು ವಿಚಾರಣೆಗೆ ಒಳಪಡಿಸಿತ್ತು. ಈ ಕುರಿತು ಸ್ಥಳೀಯ ಪೊಲೀಸರಿಗೂ ಸಹ ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ವಿಚಾರಣೆಗಾಗಿ ಹೇರೂರಿಗೆ ಹೋಗಿದ್ದ ಗಣಪತಿ ಭಟ್ ಬಳಿಕ ನೆಲಮಾವಿಗೆ ಮರಳಿದ್ದರು. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಯ ಕಾರಣದ ಬಗ್ಗೆ ಮಾಹಿತಿ ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ.
ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯ ರಾಜಕಾರಣಿಗಳೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದ್ದ ಗಣಪತಿ ಭಟ್, ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ ಆರೋಪ ಎದುರಿಸುತ್ತಿದ್ದರು. ಶವವನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ.