ನಾವು ಶಾಲೆಯಲ್ಲಿ ಕೇಳಿದ್ದು ಜ್ಞಾಪಕವಿದೆ. ನಮ್ಮ ದೇಹ ಶೇಕಡ 70% ರಷ್ಟು ನೀರಿನಾಂಶದಿಂದ ಕೂಡಿದೆ ಎಂದು. ನೀರಿನ ಮೂಲಕವೇ ದೇಹಕ್ಕೆ ಬೇಕಾದ ಮಿನರಲ್ಸ್ ನ್ನು ನಾವು ಪಡೆಯಬೇಕು. ಅಗತ್ಯ ಪ್ರಮಾಣದ ನೀರು ಕುಡಿಯುವದರಿಂದ ಚರ್ಮ ಕಾಂತಿಯುತಗೊಳಿಸಲು, ದೇಹದಿಂದ ಬೇಡದ ವಸ್ತುಗಳನ್ನು ಹೊರಹಾಕುವುದು, ಮುಂತಾದ ಕ್ರಿಯೆಗಳು ದೇಹದಲ್ಲಿ ಸಮರ್ಪಕವಾಗಿ ನಡೆಯುತ್ತದೆ
ಆರೋಗ್ಯ ತಜ್ಞರ ಪ್ರಕಾರ, ನಾವು ದಿನನಿತ್ಯ ಕನಿಷ್ಠ ಪಕ್ಷ ಎಂದರೂ, ಒಂದೆರಡು ಲೀಟರ್ ನೀರು ಕುಡಿಯಲೇಬೇಕು. ಅಲ್ಲದೇ ನಮ್ಮ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ನಿರ್ಜಲೀಕರಣದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸರಿಯಾಗಿ, ನೀರು ಕುಡಿಯದೇ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ, ಎಂದು ಆಹಾರ ತಜ್ಞರು ಆತಂಕ ವ್ಯಕ್ತ ಪಡಿಸುತ್ತಾರೆ.
ನೀರು ಕುಡಿದರಷ್ಟೇ ಸಾಲದು. ಅದರ ಗುಣ ಹೇಗಿರಬೇಕು ಎಂಬುದನ್ನೂ ತಿಳಿಯೋದು ಅಗತ್ಯ. ತುಂಬಾ ತಣ್ಣಗಿನ ಮತ್ತು ಹೆಚ್ಚು ಬಿಸಿ ಇರುವ ನೀರನ್ನು ಕುಡಿಯಬೇಡಿ. ನಾರ್ಮಲ್ ಆಗಿ ತಣ್ಣಗಿರುವ ನೀರನ್ನು ಮಾತ್ರ ಕುಡಿಯುವುದು ಒಳ್ಳೆಯದು. ಇಲ್ಲಾಂದ್ರೆ ನೀರನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿಕೊಂಡು ಕುಡಿಯಬಹುದು. ಇದರಿಂದಾಗಿ ನಮ್ಮ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆ ಮತ್ತು ಮೆಟಬಾಲಿಸಂ ಪ್ರಕ್ರಿಯೆ ಸರಾಗವಾಗಿ ನಡೆಯಲು ಸಾಧ್ಯ ಮತ್ತು ನಮ್ಮ ದೇಹ ಕೂಡ ಸ್ವಚ್ಛವಾಗುತ್ತದೆ.
ಇನ್ನು ಊಟದ ಮಧ್ಯೆ ನೀರನ್ನು ಕುಡಿಯುವುದು, ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿದಂತೆ. ಒಳ್ಳೆಯ ಅಭ್ಯಾಸವೆಂದರೆ ಊಟಕ್ಕೆ 30 ನಿಮಿಷ ಮೊದಲು ಅಥವ ಊಟದ ನಂತರ 30 ನಿಮಿಷ ಆದಮೇಲೆ ನೀರನ್ನು ಸೇವಿಸುವುದು. ಇಂಥ ನಿಯಮಿತ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯವಂತ ಜೀವನ ನಿಮ್ಮದಾಗುವುದು