ಬೆಂಗಳೂರು : ಮಲ್ಲೇಶ್ವರದ ಸ್ಯಾಂಕಿ ಕೆರೆ ಮೇಲ್ಸೇತುವೆ ನಿರ್ಮಾಣಕ್ಕೆ ವಿರೋಧ ಸೂಚಿಸಿ, ಮೌನ ಮೆರವಣಿಗೆ ನಡೆಸುತ್ತಿದ್ದ 70 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿರುವ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಭಾನುವಾರ ಮಲ್ಲೇಶ್ವರದಲ್ಲಿ ಈ ಕುರಿತು ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಅಭ್ಯರ್ಥಿ ಅನೂಪ್ ಅಯ್ಯಂಗಾರ್, ಬೊಮ್ಮಾಯಿ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.
ಮಲ್ಲೇಶ್ವರ ನಿವಾಸಿಗಳು ಕೇಳಿರುವ ಪ್ರಶ್ನೆ ಐದು ಪ್ರಶ್ನೆಗಳನ್ನು ಕಾಂಗ್ರೆಸ್ ಪುನರುಚ್ಚರಿಸಿದೆ. 2020 ರಲ್ಲಿ ಸರ್ಕಾರ ಮಾಡಿರುವ ಕಾಂಪ್ರಹೆನ್ಸ್ ಮೊಬಿಲಿಟಿ ಪ್ಲಾನ್ ನೀತಿಗೆ ಕಾಮಗಾರಿ ಅನುಗುಣವಾಗಿದೆಯೇ, ಪರಿಸರದ ಮೇಲೆ ಆಗುವ ಪರಿಣಾಮದ ಕುರಿತು ಅಧ್ಯಯನದ ವರದಿ ಎಲ್ಲಿದೆ, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶ ಪಾಲನೆಯಾಗಿದೆಯೇ, ಇಷ್ಟು ದೊಡ್ಡ ಯೋಜನೆಯ ತಜ್ಞರ ಅಭಿಪ್ರಾಯ ಹಾಗೂ ಡಿಪಿಆರ್ ಎಲ್ಲಿದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಜೊತೆಗೆ ಮಲ್ಲೇಶ್ವರ ಶಾಸಕ ಅಶ್ವತ್ಥ್ ನಾರಾಯಣ್ ವಿರುದ್ಧ ನೇರ ವಾಗ್ದಾಳಿ ನಡೆಸಿ, ಕೇವಲ 40% ಕಮಿಷನ್ ಹೊಡೆಯಲು ಸರ್ಕಾರ ಈ ಯೋಜನೆ ತರಲು ಹೊರಟಿದೆ ಎಂದು ಆರೋಪಿಸಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ರದ್ದುಪಡಿಸಿ, ಎಪ್ಪತ್ತು ಜನರ ವಿರುದ್ಧ ಹಾಕಿರುವ ಪ್ರಕರಣವನ್ನು ವಜಾಗೊಳಿಸುವುದಾಗಿ ಪ್ರಿಯಾಂಕ್ ಖರ್ಗೆ ವಾಗ್ದಾನ ನೀಡಿದರು.
ಬೊಮ್ಮಾಯಿ ಸರ್ಕಾರ ಪದೇಪದೇ ಹೇಳುತ್ತಿರುವಂತೆ ಕರ್ನಾಟಕದಲ್ಲಿ ಉತ್ತರ ಪ್ರದೇಶ ಸರ್ಕಾರ ಜಾರಿ ಮಾಡಲಾಗುತ್ತಿದೆ. ಉತ್ತರಪ್ರದೇಶ ಮಾದರಿ ಎಂದರೆ ಯಾರೂ ಪ್ರಶ್ನಿಸಬಾರದು, ಪ್ರತಿಭಟಿಸಬಾರದು ಎಂದರ್ಥ. ವಿರೋಧಪಕ್ಷವಾಗಲೀ, ಸಾರ್ವಜನಿಕರಾಗಲೀ ಸರ್ಕಾರದ ವಿರುದ್ಧ ಮಾತಾಡಿದರೆ ಪೊಲೀಸರ ಮೂಲಕ ದೌರ್ಜನ್ಯ ಪ್ರಕರಣ ದಾಖಲಿಸುವುದು ಈ ಸರ್ಕಾರದ ನೀತಿಯಾಗಿದೆ ಎಂದು ಪ್ರಿಯಾಂಕ್ ವ್ಯಂಗ್ಯವಾಡಿದ್ದಾರೆ.