ಅಭಿವೃದ್ಧಿ ಬಗ್ಗೆ ಮಾತನಾಡದೆ ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಹೇಳುವ ಮೂಲಕ ಚುನಾವಣೆಯನ್ನು ಯಾವ ರೀತಿ ಎದುರಿಸಬೇಕೆಂದು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಚಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ರಾಯಚೂರು ಶಾಸಕ ಶಿವರಾಜ್ ಪಾಟೀಲ್ ಅವರು ರಾಯಚೂರಿನ ಉಸ್ತುವಾರಿ ಆಗಿದ್ದ ಪ್ರಭು ಚವ್ಹಾಣ್ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಈ ಸರ್ಕಾರದಲ್ಲಿ ಹಣ ಸಿಗುತ್ತಿಲ್ಲ. ಹೀಗಾಗಿ ಆಂಧ್ರ ಪ್ರದೇಶಕ್ಕೆ ರಾಯಚೂರು ಸೇರಿಸಿ ಎಂದು ಹೇಳುತ್ತಾರೆ. ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸದೇ ನಗುತ್ತಾರೆ. ಅವರಿಗೆ ಒಂದು ನೊಟೀಸ್ ಕೂಡ ಕೊಟ್ಟಿಲ್ಲ. ಇನ್ನು ಸಚಿವ ಆನಂದ್ ಸಿಂಗ್ ಅವರು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಬೇಕು ಎಂದು ಹೇಳುತ್ತಾರೆ. ಆಗಲೂ ಬಿಜೆಪಿ ಒಂದು ಮಾತನ್ನೂ ಆಡಲಿಲ್ಲ. ಈ ಮಾತು ಆಡಿರುವುದು ಶಾಸಕರು ಹಾಗೂ ಸಚಿವರು. ಈ ಬಗ್ಗೆ ಬಿಜೆಪಿ ಸರ್ಕಾರ ಸ್ಪಷ್ಟ ನಿಲುವು ತಾಳಬೇಕಿತ್ತು ಎಂದು ಖರ್ಗೆ ಕಿಡಿ ಕಾರಿದ್ದಾರೆ.
ಮೋದಿ ಹಾಗೂ ಶಾ ರಾಜ್ಯಕ್ಕೆ ಬಂದಾಗ ಮಹಾರಾಷ್ಟ್ರ ತಗಾದೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.