ಚುನಾವಣೆ ಹೊತ್ತಲ್ಲೇ ಬಿಜೆಪಿಯ ಹಾಲಿ ಶಾಸಕರೊಬ್ಬ ಖಾಸಗಿ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗತೊಡಗಿವೆ. ಪುತ್ತೂರಿನ ಹಾಲಿ ಶಾಸಕ ಸಂಜೀವ ಮಠಂದೂರು ಅವರದನ್ನೆಲಾದ ಖಾಸಗಿ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಸ್ಥಳೀಯ ಬಿಜೆಪಿ ಮಖಂಡೆ ಜೊತೆಗಿರುವ ಖಾಸಗಿ ಚಿತ್ರಗಳು ಎನ್ನಲಾಗಿದ್ದು, ಚುನಾವಣೆಗೆ ಕೆಲವೇ ದಿನಗಳಿರುವಾಗ ಬಹಿರಂಗಗೊಂಡಿರುವುದು ಸ್ಥಳೀಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಸಂತ್ರಸ್ತ ಮಹಿಳೆ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸಂಜೀವ ಮಠಂದೂರು ಅವರ ಕಾರ್ಯವೈಖರಿ ಬಗ್ಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗೆ ಅಸಮಾಧಾನವಿದ್ದು, ಪ್ರಭಾವಿ ಹಿಂದುತ್ವವಾದಿ ನಾಯಕ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರಿನ ಬಿಜೆಪಿ ಟಿಕೆಟ್ ನೀಡಬೇಕೆಂಬ ಕೂಗು ಬಲವಾಗಿ ಕೇಳಿ ಬಂದಿತ್ತು. ಇಂತಹ ಹೊತ್ತಿನಲ್ಲೇ ಶಾಸಕರದೆನ್ನಲಾದ ಖಾಸಗಿ ಚಿತ್ರಗಳು ಬಹಿರಂಗಗೊಂಡಿದೆ.
ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರ ವೇಳೆ ಮಠಂದೂರು ಅವರ ಕಾರಿಗೆ ಶಾಸಕರ ವಿರೋಧಿ ಬಣದವರು ಮುತ್ತಿಗೆ ಹಾಕಿದ್ದರು.
ಪುತ್ತೂರಿಗೆ ಅಮಿತ್ ಶಾ ಆಗಮಿಸಿದ ಕಾರ್ಯಕ್ರಮದಿಂದ ಪುತ್ತೂರು ಕ್ಷೇತ್ರದ ಬಿಜೆಪಿ ಎರಡು ಹೋಳಾಗಿದೆ. ಅಮಿತ್ ಶಾರನ್ನು ಸ್ವಾಗತಿಸಿ ಅರುಣ್ ಕುಮಾರ್ ಪುತ್ತಿಲರ ಬೆಂಬಲಿಗರು ಹಾಕಿದ್ದ ಪೋಸ್ಟರ್‌ಗೆ ಶಾಸಕರು ಕಿಡಿ ಕಾರಿದ್ದರು.
ಚುನಾವಣೆ ಬರುವಾಗ ಅಣಬೆಗಳಂತೆ ಒಬ್ಬೊಬ್ಬರು ಹುಟ್ಟಿಕೊಳ್ಳುತ್ತಾರೆ ಎಂದು ಶಾಸಕರು ಹೇಳಿಕೆ ನೀಡಿದ್ದು ಪುತ್ತಿಲ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪುತ್ತೂರು ಪಟ್ಟಣದಲ್ಲಿ ಶಾಸಕರಿಗೆ ಮುತ್ತಿಗೆ ಹಾಕಿ ʼಅಣಬೆʼ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಲಾಗಿತ್ತು.
ಈ ವಿವಾದ ತಣ್ಣಗಾಗುವ ಮೊದಲೇ ಖಾಸಗಿ ಚಿತ್ರಗಳು ಹರಿದಾಡಲಾರಂಭಿಸಿದ್ದು, ಕ್ಷೇತ್ರ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ. ಬಿಜೆಪಿ ಟಿಕೆಟ್ ಇನ್ನೂ ಫೈನಲ್ ಆಗದಿರುವುದರಿಂದ ಇದು ಟಿಕೆಟ್‌ಗಾಗಿ ನಡೆಯುತ್ತಿರುವ ಫೈಟ್‌ನ ಒಂದು ಭಾಗವೇ ಎಂಬ ಚರ್ಚೆಗಳೂ ನಡೆಯುತ್ತಿವೆ. ಆದರೆ, ಇದುವರೆಗೂ ವೈರಲ್ ಚಿತ್ರಗಳ ಬಗ್ಗೆ ಶಾಸಕ ಮಠಂದೂರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ