ಬೆಂಗಳೂರು : ಈ ತಿಂಗಳ ಯಲ್ಲಿ ರಂಜಾನ್, ಯುಗಾದಿ ಹಿನ್ನಲೆ ಅದೆಷ್ಟೋ ಜನ ಮನೆಗೆ ಹೋಗಲು ಪ್ಲಾನ್ ಮಾಡುತ್ತಿದ್ದಾರೆ. ಇದೀಗ ಬೆಂಗಳೂರಿನಿಂದ ಊರಿಗೆ ಹೋಗುವವರಿಗೆ ಖಾಸಗಿ ಬಸ್ ಗಳು ಬೆಲೆ ಏರಿಕೆ ಶಾಕ್ ನೀಡಿದ್ದು, ದರವನ್ನು ಶೇ. 50 – 60 ರಷ್ಟು ಏರಿಕೆ ಮಾಡಲಾಗಿದೆ.
ಸಾಲು ಸಾಲು ರಜೆಯ ಹಿನ್ನಲೆ ಜನರೆಲ್ಲ ಕುಟುಂಬ ಸಮೇತ ಊರಿಗೆ ಮರಳಲು ಮಾರ್ಚ್ 28ಕ್ಕೆ ಹೊರಡಲು ಪ್ಲಾನ್ ಹಾಕಿಕೊಂಡಿದ್ದಾರೆ. ಇದೀಗ ಪ್ಲಾನ್ ಹಾಕಿಕೊಂಡವರಿಗೆ ಖಾಸಗಿ ಬಸ್ ಗಳು ಬಿಗ್ ಶಾಕ್ ನೀಡಿದ್ದು, ಊರಿಗೆ ಹೋಗೋದೇ ಬೇಡ ಎನ್ನುವಂತಹ ಪರಿಸ್ಥಿತಿ ತಂದಿದೆ.
ಸಾಮಾನ್ಯ ದಿನಗಳಲ್ಲಿ 1000 ರೂಪಾಯಿ ಇರುವ ಬಸ್ ದರ ಇದೀಗ 2 ಸಾವಿರ ಗಡಿ ದಾಟಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಾರದ ದಿನ 800 ರೂಪಾಯಿ ಇತ್ತು. ಇದೀಗ 2 ಸಾವಿರಕ್ಕೆ ಏರಿಕೆಯಾಗಿದೆ. ಇನ್ನು ಮಂಗಳೂರಿಗೆ 2500 ರೂಪಾಯಿ ವರೆಗೆ ತಲುಪಿದೆ. ಜೊತೆಗೆ ಬೆಳಗಾವಿಗೆ ಬಸ್ ದರ 3000 ಸಾವಿರ ರೂಪಾಯಿ ತಲುಪಿದೆ.
ಪ್ರತಿ ವರ್ಷದಂತೆ ಹಬ್ಬಕ್ಕೆಂದು ಊರಿಗೆ ಹೋಗುವ ಪ್ಲಾನ್ ಹಾಕಿಕೊಂಡಿದ್ದ ಜನರಿಗೆ ಖಾಸಗಿ ಬಸ್ ಗಳು ಬೆಲೆ ಏರಿಕೆ ಶಾಕ್ ನೀಡಿದ್ದು, ಹಣವಿದ್ದವರು ಖಾಸಗಿ ಬಸ್ ನಲ್ಲಿ ಟಿಕೆಟ್ ಮಾಡಿದ್ದಾರೆ. ಇನ್ನು ಕೆಲವರು ಸಾರಿಗೆ ಬಸ್ ಹಾಗೂ ರೈಲಿನ ಮೊರೆ ಹೋಗಿದ್ದಾರೆ.
ರಾಜ್ಯ ಸರಕಾರ ಈ ಬಾರಿಯೂ ಬಜೆಟ್‌ನಲ್ಲಿ ಖಾಸಗಿ ಬಸ್‌ನವರಿಗೆ ಒಂದು ರೂಪಾಯಿ ಕೂಡ ಮೀಸಲಿಟ್ಟಿಲ್ಲ. ಶಕ್ತಿ ಯೋಜನೆ ಜಾರಿಯಾದಾಗಿಂದ ಖಾಸಗಿ ಬಸ್ ಮಾಲೀಕರು ದೊಡ್ಡ ನಷ್ಟ ಎದುರಿಸುತ್ತಿದ್ದಾರೆ. ರಸ್ತೆ ತೆರಿಗೆ ಶುಲ್ಕ, ವಿಮೆ, ಹೊಸ ಬಸ್‌ಗಳ ಬೆಲೆ, ಬಸ್‌ಗಳ ಬಿಡಿಭಾಗಗಳೂ ಸೇರಿದಂತೆ ಪ್ರತಿಯೊಂದರ ದರವೂ ಹೆಚ್ಚಾಗಿದೆ.
ಅಷ್ಟೇ ಅಲ್ಲದೆ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದೆ ಎಂದು ಹೇಳಿ ಬಸ್ ಟಿಕೆಟ್ ದರ ಏರಿಕೆ ಮಾಡಿದ್ದಾರೆ. ಅಂತದರಲ್ಲಿ ಹಬ್ಬದ ಸಮಯದಲ್ಲಿ ಟಿಕೆಟ್ ದರ ಏರಿಕೆ ಮಾಡಿದರೆ ತಪ್ಪೇನು. ಹಬ್ಬದ ಮುಗಿದ ಬಳಿಕ ಎಂದಿನಂತೆ ದರ ಇಡಲಾಗುತ್ತದೆ ಎಂದು ಖಾಸಗಿ ಬಸ್ ಮಾಲೀಕರು ತಿಳಿಸಿದ್ದಾರೆ.