ದಾವಣೆಗೆರೆ ಬರಲಿದ್ದಾರೆ ಪ್ರಧಾನಿ ಮೋದಿ: ಬೆಣ್ಣೆನಗರಿ ಮಾರ್ಗದಲ್ಲಿ ಮಹತ್ತರ ಬದಲಾವಣೆ.!
ಮಾರ್ಚ್ 25 ರಂದು ದಾವಣಗೆರೆಯಲ್ಲಿ ನಡೆಯಲಿರುವ ಬಿಜೆಪಿ ವಿಜಯಸಂಕಲ್ಪ ಯಾತ್ರೆಯ ಮಹಾಸಂಗಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ 4:30 ವರೆಗೆ ಪ್ರಧಾನಿ ದಾವಣಗೆರೆಯಲ್ಲಿ ಇರಲಿದ್ದಾರೆ. ಬಿಜೆಪಿಯ ಮಹತ್ವಾಕಾಂಕ್ಷಿಯ ಈ ಸಮಾವೇಶಕ್ಕೆ ರಾಜ್ಯದ ವಿವಿಧೆಡೆಯಿಂದ ಸುಮಾರು 10 ಲಕ್ಷ ಮಂದಿ ಸೇರುವ ನಿರೀಕ್ಷೆಯಿದೆ.
ಪ್ರಧಾನಿ ಮೋದಿ ಆಗಮನದ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ ನಾಳೆ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ ಬಂದ್ ಆಗಲಿದ್ದು, ನಗರದ ಹೊರವಲಯದಲ್ಲಿ ಬಸ್ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು, ಚಿತ್ರದುರ್ಗ, ತುಮಕೂರು ಕಡೆಗಳಿಂದ ಕಾರ್ಯಕ್ರಮಕ್ಕೆ ಬರುವವರಿಗೆ ದಾವಣಗೆರೆ ಎಪಿಎಂಸಿ ಪಕ್ಕದ ಚಿಕ್ಕನಳ್ಳಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಕಡೆಯಿಂದ ಬರುವರಿಗೆ ಯುಬಿಡಿಟಿ ಕಾಲೇಜ್ ಡಿಆರ್ ಹೈಸ್ಕೂಲ್ ಬಳಿ ವ್ಯವಸ್ಥೆ ಮಾಡಲಾಗಿದೆ. ಹಾವೇರಿ, ಹುಬ್ಬಳ್ಳಿ ಧಾರವಾಡದಿಂದ ಬರುವರಿಗೆ ಆವರಗೊಳ್ಳ ಬಳಿ ಇರುವ ಕೇಂದ್ರಿಯ ವಿದ್ಯಾಲಯದ ಬಳಿ ವ್ಯವಸ್ಥೆ ಮಾಡಿದ್ದರೆ, ವಿಜಯನಗರ, ಚಳ್ಳಕೆರೆ ಭಾಗದಿಂದ ಬರುವರಿಗೆ ಕೊಂಡಜ್ಜಿ ರಸ್ತೆಯ ಬಡಗಿ ಕೃಷ್ಣಪ್ಪ ಲೇಔಟ್ ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಮಹಾಸಂಗಮಕ್ಕೆ ಒಂದು ಸಾವಿರ ಅಡಿ ಉದ್ದದ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, ರಾಜ್ಯದ ಎಲ್ಲ ಹಾಲಿ ಶಾಸಕ, ಸಂಸದರು ಸೇರಿದಂತೆ ಮಾಜಿ ಶಾಸಕ, ಸಂಸದರು ಮಹಾಸಂಗಮದಲ್ಲಿ ಭಾಗವಹಿಸಲಿದ್ದಾರೆ. 420ಅಡಿ ಅಗಲ ಹಾಗೂ ಒಂದು ಸಾವಿರ ಅಡಿ ಉದ್ದದ ಬೃಹತ್ ವೇದಿಕೆ ಇದಕ್ಕಾಗಿಯೇ ಸಜ್ಜುಗೊಂಡಿದೆ.
ವೇದಿಕೆಗೆ ಬರುವ ಮೊದಲು ಪ್ರಧಾನಿ ನರೇಂದ್ರ ಮೋದಿ ಪ್ರೇಕ್ಷಕರ ಗ್ಯಾಲರಿಯಲ್ಲಿ ರೋಡ್ ಶೋ ಮಾಡಲಿದ್ದಾರೆ. ಸಮಾವೇಶದ ಪ್ರದೇಶದಲ್ಲಿ ಖಾಕಿ ಭಾರೀ ಕಣ್ಗಾವಲು ಇಟ್ಟಿದ್ದು, 2 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಟ, ಕಪ್ಪು ಬಟ್ಟೆ, ನೀರಿನ ಬಾಟಲ್, ಬ್ಯಾಗ್ ಗಳನ್ನು ನಿಷೇಧಿಸಲಾಗಿದೆ. ಸಮಾವೇಶಕ್ಕೆ ಬರುವರನ್ನು ಎರಡು ಹಂತದಲ್ಲಿ ತಪಾಸಣೆ ಮಾಡಲಾಗುತ್ತದೆ.
ಎಂಟು ಜನ ಎಸ್.ಪಿ ಮತ್ತು ಎ.ಎಸ್.ಪಿಗಳು, ಡಿವೈಎಸ್ಪಿ 32, ಇನ್ಸ್ಪೆಕ್ಟರ್ಗಳು 85, ಹೋಮ್ ಗಾರ್ಡ್ಸ್ 900 ಸೇರಿದಂತೆ 4000 ಪೊಲೀಸರ ನಿಯೋಜನೆ ಮಾಡಲಾಗಿದೆ.