2023 ನೇ ಸಾಲಿನಲ್ಲಿ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದ ಗಣ್ಯರಿಗೆ ನಾಳೆ ರಾಷ್ಟ್ರಪತಿ ದ್ರೌಪದಿಮುರ್ಮು ಪ್ರಶಸಿಪ್ರದಾನ ಮಾಡಲಿದ್ದಾರೆ.
ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ, ಮಾಜಿ ಸಿಎಂ ಎಸ್.ಎಂ.ಕೃಷ್ಣ, ಐಟಿ ಉದ್ಯಮಿ, ಸಮಾಜಸೇವಕಿ ಸುಧಾಮೂರ್ತಿ ಮತ್ತಿತರ ಕನ್ನಡಿಗರಿಗೆ ಯುಗಾದಿಯಂದು ಬೆಲ್ಲವೇ ಸಿಕ್ಕಿದೆ.
ದೇಶಾದ್ಯಂತ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೈಗೈದ 106 ಮಂದಿಗೆ ಈ ಬಾರಿ ಪದ್ಮಪ್ರಶಸ್ತಿ ನೀಡಲಾಗುತ್ತಿದ್ದು, ಕನ್ನಡಿಗರಲ್ಲಿ ವಿಜ್ಞಾನ ಎಂಜಿನಿಯರಿಂಗ್ ವಿಭಾಗದಲ್ಲಿ ಖಾದರ್‍ವಲ್ಲಿ ದುಡೇಕುಲಾ, ಕಲಾ ವಿಭಾಗದಲ್ಲಿ ಕೊಡವ ಸಂಸ್ಕøತಿಯನ್ನು ಉಳಿಸಲು ಶ್ರಮಿಸಿದ ರಾಣಿ ಮಾಚಯ್ಯ, ತಮಟೆಯ ತಂದೆ ಎಂದೇ ಪ್ರಖ್ಯಾತರಾದ ತಮಟೆವಾದಕ ಪಿಂಡಿಪನಹಳ್ಳಿ ಮುನಿವೆಂಕಟಪ್ಪ, ವಿಶ್ವವಿಖ್ಯಾತ ಬೀದರ್‍ನ ಬಿದ್ರಿ ಕಲಾವಿದ ಶಾ ರಶೀದ್ ಅಹ್ಮದ್ ಖಾದ್ರಿ ಮತ್ತು ಪುರಾತತ್ವ ಶಾಸ್ತ್ರಜ್ಞ ಎಸ್. ಸುಬ್ಬರಾವ್ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮವಿಭೂಷಣಕ್ಕೆ ಕನ್ನಡಿಗ ಎಸ್.ಎಂ.ಕೃಷ್ಣ ಸೇರಿದಂತೆ ಆರು ಮಂದಿ ಸಾಧಕರು ಆಯ್ಕೆಯಾಗಿದ್ದಾರೆ. ಪದ್ಮಭೂಷಣ ಪ್ರಶಸ್ತಿಯನ್ನು ಒಂಬತ್ತು ಮಂದಿ ಸಾಧಕರು ಪಡೆಯುತ್ತಿದ್ದರೆ, ದೇಶಾದ್ಯಂತ 91 ಮಂದಿ ಪದ್ಮಶ್ರೀ ಪ್ರಶಸ್ತಿಯನ್ನು ನಾಳೆ ಸ್ವೀಕರಿಸಲಿದ್ದಾರೆ.
ಮಹಾರಾಷ್ಟ್ರದ ಕಲಾವಿದ ಜಾಕೀರ್ ಹುಸೇನ್, ಪಶ್ಚಿಮ ಬಂಗಾಳದ ಖ್ಯಾತ ವೈದ್ಯ ದಿಲೀಪ್ ಮಹಲನಬೀಸ್ (ಮರಣೋತ್ತರ), ಅನಿವಾಸಿ ಭಾರತೀಯ ವಿಜ್ಞಾನಿ ಶ್ರೀನಿವಾಸ ವರದಾನ್, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ (ಮರಣೋತ್ತರ) ಪದ್ಮವಿಭೂಷಣ ಪ್ರಶಸ್ತಿ ಪಡೆದ ಗಣ್ಯರು.
ಪದ್ಮಶ್ರೀ ಪ್ರಶಸ್ತಿ ವಿಜೇತರಲ್ಲಿ ಬಹುತೇಕರು ಕಲಾವಿದರು, ಸಮಾಜಸೇವಕರು, ಕೃಷಿಕರೇ ಇದ್ದಾರೆ. ಸಿದ್ದಿ ಬುಡಕಟ್ಟು ಸಮುದಾಯದ ಏಳಿಗೆಗೆ ಶ್ರಮಿಸಿದ ಹೀರಾಬಾಯಿ ಲೋಬಿ, ಹಿಮಾಚಲ ಪ್ರದೇಶದ ಸಾವಯವ ಕೃಷಿಕ ತೂಲಾ ರಾಮ್ ಉಪ್ರೇತಿ, ತೆಲಂಗಾಣದ ಭಾಷಾ ವಿದ್ವಾಂಸ ಬಿ.ರಾಮಕೃಷ್ಣ ರೆಡ್ಡಿ, ಕೇರಳದ ಸಾಮಾಜಿಕ ಕಾರ್ಯಕರ್ತ ವಿ.ಪಿ.ಅಪ್ಪುಕುಟ್ಟನ್ ಪೊಡುವಾಳ್, ಸಿಕ್ಕಿಂನ ಸಾವಯವ ಕೃಷಿಕ ನೆಕ್ರಂ ಶರ್ಮ ಪದ್ಮಶ್ರೀ ಪಡೆದವರ ಪಟ್ಟಿಯಲ್ಲಿದ್ದಾರೆ.