ಹಿಂದುತ್ವ, ರಾಷ್ಟ್ರೀಯತೆ ಮತ್ತು ಅಭಿವೃದ್ಧಿ ಇವು ಮೂರು ಭಾರತೀಯ ಜನತಾ ಪಕ್ಷದ ಮೂರು ಸದೃಢ ಸ್ತಂಭಗಳು. ಇವುಗಳಲ್ಲಿ ಕನಿಷ್ಠ ಎರಡು ಸ್ತಂಭಗಳನ್ನು ಅಲುಗಾಡಿಸದ ಹೊರತು ಬಿಜೆಪಿಯನ್ನು 2024ರಲ್ಲಿ ಮಣಿಸಲು ಸಾಧ್ಯವೇ ಇಲ್ಲ ಎಂದು ಚುನಾವಣಾ ರಣತಂತ್ರ ತಜ್ಞ ಪ್ರಶಾಂತ್ ಕಿಶೋರ್ ಎನ್‍ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಹಿಂದುತ್ವ ಸಿದ್ದಾಂತದ ವಿರುದ್ಧ ಹೋರಾಡಲು ಬಹುತ್ವ ಸಿದ್ಧಾಂತದ ಒಕ್ಕೂಟ ಅತ್ಯವಶ್ಯ. ಗಾಂಧಿವಾದ, ಅಂಬೇಡ್ಕರ್ ವಾದ, ಸಮಜವಾದ, ಎಡಪಂಥ ಹೀಗೆ ಸಿದ್ದಾಂತಗಳು ಅತ್ಯವಶ್ಯ. ಆದರೆ ಸಿದ್ದಾಂತಗಳ ಬಗ್ಗೆ ಕುರುಡು ನಂಬಿಕೆ ಬೇಡ ಎಂದಿರುವ ಪ್ರಶಾಂತ್ ಕಿಶೋರ್, ತನ್ನದು ಮಹಾತ್ಮ ಗಾಂಧಿ ಸಿದ್ಧಾಂತ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಬಿಹಾರದ ಜನ ಸೂರಜ್ ಯಾತ್ರೆಯ ಗಾಂಧಿ ನೇತೃತ್ವದ ಕಾಂಗ್ರೆಸ್‍ನ ಸಿದ್ಧಾಂತಗಳ ಪುನರುಜ್ಜೀವನವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಹಾಗೂ ತನ್ನ ನಡುವೆ ನಡೆದ ಜಟಾಪಟಿಯ ಬಗ್ಗೆ ಉಲ್ಲೇಖಿಸಿರುವ ಪ್ರಶಾಂತ್ ಕಿಶೋರ್, ನನ್ನ ಉದ್ದೇಶ ಗಾಂಧಿಯ ಆದರ್ಶಗಳನ್ನು ಮರುಸ್ಥಾಪನೆಗೊಳಿಸುವುದಾಗಿತ್ತು. ಆದರೆ ಅವರ ಉದ್ದೇಶ ಚುನಾವಣೆ ಗೆಲ್ಲುವುದಾಗಿತ್ತು. ಹೀಗಾಗಿ ನಮಗೆ ಹೊಂದಾಣಿಕೆಯಾಗಲಿಲ್ಲ ಎಂದಿದ್ದಾರೆ.
ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆಯ ಬಗ್ಗೆ ಪ್ರತಿಕ್ರಿಯಿಸಿ, ಈ ಯಾತ್ರೆಯ ಪರಿಣಾಮ ಚುನಾವಣಾ ಕಣದಲ್ಲಿ ಸಾಬೀತಾಗಲಿದೆ ಎಂದು ನುಡಿದಿದ್ದಾರೆ.
ಆರು ತಿಂಗಳ ಯಾತ್ರೆ ಕೇವಲ ಕಾಲ್ನಡಿಗೆ ಮಾತ್ರವಲ್ಲ. ಅದರ ಬಗ್ಗೆ ಸಾಕಷ್ಟು ಪ್ರಶಂಸೆ ಮತ್ತು ಟೀಕೆಗಳೂ ವ್ಯಕ್ತವಾಗಿದೆ. ಆದರೆ ಆರು ತಿಂಗಳ ಕಾಲ್ನಡಿಗೆಯ ಬಳಿಕ ಸ್ವಲ್ಪವಾದರೂ ಸುಧಾರಣೆ ಕಾಣಿಸಬೇಕಲ್ಲವೇ ಎಂದು ಪ್ರಶ್ನಿಸಿರುವ ಪ್ರಶಾಂತ್ ಕಿಶೋರ್, ಈ ಯಾತ್ರೆಯ ಉದ್ದೇಶ ಪಕ್ಷದ ಮತಗಳಿಕೆ ಹೆಚ್ಚಳ. ನನ್ನ ಪ್ರಕಾರ ಯಾತ್ರೆಯೆಂದರೆ ಅದೊಂದು ಅಭಿಯಾನವಲ್ಲ. ಆ ಪ್ರದೇಶವನ್ನು ಅರ್ಥೈಸಿಕೊಳ್ಳುವ ಕ್ರಿಯೆ ಎಂದಿದ್ದಾರೆ.