ಚನ್ನಪಟ್ಟಣ ಕ್ಷೇತ್ರದಿಂದ ಟಿಕೆಟ್ ದೊರೆಯುವ ಸಾಧ್ಯತೆ ಇಲ್ಲವಾಗುತ್ತಿದ್ದಂತೆಯೇ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಎಂದೇ ಬಿಂಬಿಸಲ್ಪಟ್ಟಿದ್ದ ಪ್ರಸನ್ನಗೌಡ ಜೆಡಿಎಸ್ ಕಡೆಗೆ ಪಕ್ಷಾಂತರಗೊಂಡಿದ್ದಾರೆ. ಪ್ರಸನ್ನಗೌಡ ಅವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಕೆಂಪುಹಾಸಿನ ಸ್ವಾಗತ ಕೋರಿದ್ದಾರೆ.
ಕ್ಷೇತ್ರದಾದ್ಯಂತ ಓಡಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಪ್ರಸನ್ನ ಗೌಡ ಅವರು ಎಂಎಲ್‍ಎ ಸ್ಥಾನದಿಂದ ಸ್ಪರ್ಧಿಸಲು ತುದಿಗಾಲಿನಲ್ಲಿ ನಿಂತಿದ್ದರು. ಆದರೆ ಕಾಂಗ್ರೆಸ್ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಕಾಂಗ್ರೆಸ್‍ಗೆ ಕರೆತರುವ ಚಿಂತನೆಯಲ್ಲಿ ತೊಡಗಿತ್ತು. ಜೊತೆಗೆ ಚಿತ್ರನಟಿ ರಮ್ಯಾರನ್ನು ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆದಿತ್ತು. ಇದರಿಂದ ತನಗೆ ಟಿಕೆಟ್ ಸಿಗುವುದು ಅಸಾಧ್ಯ ಎಂದು ತಿಳಿಯುತ್ತಿದ್ದಂತೆಯೇ ಪ್ರಸನ್ನಗೌಡ ಜೆಡಿಎಸ್‍ಗೆ ಕಾಲಿರಿಸಿದ್ದಾರೆ.
ಕಾಂಗ್ರೆಸ್ ಸುಳ್ಳು ಘೋಷಣೆಗಳಿಂದ, ಭರವಸೆಗಳಿಂದ ಬೇಸತ್ತಿದ್ದೇನೆ. ಕುಮಾರಸ್ವಾಮಿ ನಾಯಕತ್ವವನ್ನು ಮೆಚ್ಚಿಕೊಂಡು ಜೆಡಿಎಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ಪ್ರಸನ್ನಗೌಡ ಪ್ರತಿಕ್ರಿಯಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ತವರಿನಲ್ಲೇ ಡಿ.ಕೆ.ಶಿವಕುಮಾರ್‍ಗೆ ಹಿನ್ನೆಡೆಯಾಗುವು ಸಂಭವನೀಯತೆ ಕಾಣಿಸಿಕೊಂಡಿದೆ.