ಬೆಂಗಳೂರು : ಚಿಕ್ಕಬಳ್ಳಾಪುರದ (Chikkaballapura) ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಡೆದ ಗದ್ದಲದ ನಂತರ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar ) ಅವರಿಗೆ ಜೀವಭಯದ (Life Threat ) ಆತಂಕ ಎದುರಾಗಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯ ಗುಪ್ತಚರ ಇಲಾಖೆಯು ಅವರಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ಗೃಹ ಇಲಾಖೆಗೆ ವರದಿ ಸಲ್ಲಿಸಿದೆ
ಜೂನ್ 27 ರಂದು ನಡೆದ ಸರ್ಕಾರಿ ಕೆಂಪೇಗೌಡ ಜಯಂತಿ (Kempegowda Jayanthi ) ಕಾರ್ಯಕ್ರಮದಲ್ಲಿ ತೀವ್ರ ಗದ್ದಲ ಮತ್ತು ಅಶಾಂತಿ ಉಂಟಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ದೇವೇಗೌಡ ಹಾಗೂ ಕುಮಾರಸ್ವಾಮಿ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ‘ಗೋ ಬ್ಯಾಕ್’ ಘೋಷಣೆ ಕೂಗಿದ್ದರು. ಇದರಿಂದ ಆಕ್ರೋಶಗೊಂಡ ಶಾಸಕರು ಹೊರಬಂದು ತೊಡೆ ತಟ್ಟಿ ಸವಾಲು ಹಾಕಿದಾಗ, ಅವರ ಮೇಲೆ ಚಪ್ಪಲಿ ಎಸೆಯಲಾಗಿತ್ತು.
ಈ ಅನಿರೀಕ್ಷಿತ ಘಟನೆಯು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮುಖಂಡರ ನಡುವೆ ಆರೋಪ-ಪ್ರತ್ಯಾರೋಪಗಳು ಹಾಗೂ ಪೊಲೀಸ್ ದೂರುಗಳು ದಾಖಲಾಗಿವೆ. ಅಲ್ಲದೆ, ಪ್ರತಿಭಟನಾಕಾರರು ತನ್ನ ಕುಟುಂಬವನ್ನು ನಿಂದಿಸಿ, ತನಗೇ ಚಪ್ಪಲಿ ಎಸೆದಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಕಣ್ಣೀರು ಹಾಕಿದ್ದರು.
ಕ್ಷೇತ್ರದಲ್ಲಿ ಉಂಟಾಗಿರುವ ತೀವ್ರ ರಾಜಕೀಯ ಉದ್ವಿಗ್ನತೆಯ ಬೆನ್ನಲ್ಲೇ, ಜುಲೈ 2 ರಂದು ರಾಜ್ಯ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಚಿಕ್ಕಬಳ್ಳಾಪುರದ ವಿವಿಧ ಭಾಗಗಳಿಗೆ ಭೇಟಿ ನೀಡಿ ರಹಸ್ಯ ಮಾಹಿತಿ ಕಲೆಹಾಕಿದ್ದಾರೆ. ಈ ಪರಿಶೀಲನೆಯ ನಂತರ, ಪ್ರಸ್ತುತ ಪರಿಸ್ಥಿತಿಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ತೀವ್ರ ಜೀವಭಯದ ಆತಂಕ ಎದುರಾಗಿದೆ ಎಂದು ಅಧಿಕಾರಿಗಳು ವರದಿ ಸಿದ್ಧಪಡಿಸಿದ್ದಾರೆ.
ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಸಕರಿಗೆ ತಕ್ಷಣವೇ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಒದಗಿಸಬೇಕು ಎಂದು ಗುಪ್ತಚರ ಇಲಾಖೆಯು ಗೃಹ ಇಲಾಖೆಗೆ ಮಹತ್ವದ ವರದಿ ಸಲ್ಲಿಸಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬೇಕು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ : ಬಲೂಚಿಸ್ತಾನದಲ್ಲಿ ಭೀಕರ ಬಾಂಬ್ ಸ್ಫೋಟ: 30ಕ್ಕೂ ಹೆಚ್ಚು ಪಾಕ್ ಸೈನಿಕರ ಸಾ*ವು!