ಬೆಂಗಳೂರು: ನೀವು ಬೇಕರಿಗಳಲ್ಲಿ ಸಿಗುವ ಗರಿಗರಿಯಾದ ಆಲೂಗಡ್ಡೆ ಚಿಪ್ಸ್ (Potato Chips) ಪ್ರಿಯರೇ? ಹಾಗಿದ್ರೆ ಇನ್ಮುಂದೆ ನೀವು ಹುಷಾರಾಗಿರಬೇಕು.
ಸಿಲಿಕಾನ್ ಸಿಟಿಯ ಬೇಕರಿಯೊಂದರಲ್ಲಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಾ, ಅಸಹ್ಯಕರ ಹಾಗೂ ಕೊಳೆತ ಸ್ಥಿತಿಯಲ್ಲಿದ್ದ ಚಿಪ್ಸ್‌ಗಳನ್ನು ಮಾರಾಟ ಮಾಡುತ್ತಿದ್ದ ದಂಧೆಯನ್ನು ಅಧಿಕಾರಿಗಳು ಪತ್ತೆಹಚ್ಚಿದ್ದು, ಬೇಕರಿಯನ್ನು ಸೀಜ್ ಮಾಡಿದ್ದಾರೆ.
ಅಸಹ್ಯಕರ ವಾತಾವರಣದಲ್ಲಿ ಚಿಪ್ಸ್ ತಯಾರಿ
ಬೆಂಗಳೂರಿನ ಸುಂಕದಕಟ್ಟೆ ಮುಖ್ಯ ರಸ್ತೆಯಲ್ಲಿರುವ ‘ಶ್ರೀ ಲಕ್ಷ್ಮಿ ವೆಂಕಟೇಶ್ವರ ಹಾಟ್ ಚಿಪ್ಸ್’ ಬೇಕರಿಯ ಮೇಲೆ ಬಿಬಿಎಂಪಿ (BBMP) ಆರೋಗ್ಯ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದಾಗ ಈ ಭೀಕರ ಸತ್ಯ ಬೆಳಕಿಗೆ ಬಂದಿದೆ. ಬೇಕರಿಯ ಹಿಂಭಾಗದಲ್ಲಿ ತೀರಾ ಕೊಳಕಾದ ಜಾಗದಲ್ಲಿ, ಕಪ್ಪಗಾಗಿದ್ದ ಹಳೆಯ ಎಣ್ಣೆಯನ್ನು ಬಳಸಿ ಆಲೂಗಡ್ಡೆ ಹಾಗೂ ಇತರ ತಿಂಡಿಗಳನ್ನು ಕರಿಯಲಾಗುತ್ತಿತ್ತು. ಅಷ್ಟೇ ಅಲ್ಲದೆ, ತಿನ್ನಲು ಯೋಗ್ಯವಲ್ಲದ ಕೊಳೆತ ಆಲೂಗಡ್ಡೆಗಳನ್ನು ಬಳಸಿ ಚಿಪ್ಸ್ ತಯಾರಿಸುತ್ತಿರುವುದು ಪತ್ತೆಯಾಗಿದೆ.
ಸಾರ್ವಜನಿಕರ ದೂರಿನ ಬೆನ್ನಲ್ಲೇ ಆ್ಯಕ್ಷನ್..!
ಸದರಿ ಬೇಕರಿಯಿಂದ ಚಿಪ್ಸ್ ಖರೀದಿಸಿದ್ದ ಗ್ರಾಹಕರೊಬ್ಬರಿಗೆ ಅದರಲ್ಲಿ ಕೊಳೆತ ವಾಸನೆ ಹಾಗೂ ನಿಶ್ಚಿತ ಗುಣಮಟ್ಟ ಇಲ್ಲದಿರುವುದು ಕಂಡುಬಂದಿತ್ತು. ತಕ್ಷಣವೇ ಅವರು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ, ಕಿಚನ್‌ನಲ್ಲಿ ಸತ್ತ ಜಿರಳೆಗಳು, ಧೂಳು ಹಾಗೂ ಇಲಿಗಳ ಕಾಟ ಇರುವುದು ಪತ್ತೆಯಾಗಿದೆ. ತಯಾರಿಸಿಟ್ಟಿದ್ದ ನೂರಾರು ಕೆಜಿ ತೂಕದ ನಕಲಿ ಹಾಗೂ ಕಳಪೆ ಗುಣಮಟ್ಟದ ಚಿಪ್ಸ್ ಪ್ಯಾಕೆಟ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಧಿಕಾರಿಗಳ ಎಚ್ಚರಿಕೆ..!
“ಹಣದ ಆಸೆಗಾಗಿ ಸಾರ್ವಜನಿಕರ, ಅದರಲ್ಲೂ ಮುಖ್ಯವಾಗಿ ಮಕ್ಕಳ ಆರೋಗ್ಯದ ಜೊತೆ ಆಟವಾಡುವ ಇಂತಹ ಬೇಕರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಬೇಕರಿಯಲ್ಲಿ ನೈರ್ಮಲ್ಯದ ಕೊರತೆ ಕಂಡುಬಂದಲ್ಲಿ ತಕ್ಷಣವೇ ದೂರು ನೀಡಿ,” ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.
ಸದ್ಯ ನಿಯಮ ಉಲ್ಲಂಘನೆ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಬೇಕರಿಯ ಪರವಾನಗಿಯನ್ನು ರದ್ದುಗೊಳಿಸಿ, ಅಂಗಡಿಗೆ ಬೀಗ ಜಡಿಯಲಾಗಿದೆ.