ಬೆಂಗಳೂರು: ಎಟಿಎಂಗಳಿಗೆ ಹಣ ತುಂಬುವ ವಾಹನದಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 10 ಲಕ್ಷ ರೂ. ಪತ್ತೆಯಾಗಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ವಾಹನದಲ್ಲಿದ್ದ ಸಿಬ್ಬಂದಿ ಹೇಳಿದ ಲೆಕ್ಕಕ್ಕೂ ವಾಹನದಲ್ಲಿದ್ದ ಹಣದ ಲೆಕ್ಕಕ್ಕೂ ತಾಳೆಯಾಗದ ಕಾರಣ, ವಾಹನ ಮತ್ತು ಹಣವನ್ನು ಜಪ್ತಿಪಡಿಸಿಕೊಳ್ಳಲಾಗಿದೆ.
ಚುನಾವಣಾ ನೀತಿಸಂಹಿತೆಯ ಪ್ರಕಾರ ಚುನಾವಣಾ ಅಕ್ರಮಗಳನ್ನು ತಡೆಯಲು ರಾಜ್ಯಾದ್ಯಂತ ಆಯಕಟ್ಟಿನ ಜಾಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಹೆಬ್ಬಗೋಡಿ ಚೆಕ್‍ಪೋಸ್ಟ್ ನಲ್ಲಿ ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ಮೂರು ವಾಹನಗಳನ್ನು ಶುಕ್ರವಾರ ತಪಾಸಣೆಗೊಳಪಡಿಸಲಾಗಿತ್ತು. ಇವುಗಳ ಪೈಕಿ ಒಂದು ವಾಹನದಲ್ಲಿ ಹೆಚ್ಚುವರಿ 10 ಲಕ್ಷ ರೂ. ಹಣವಿರುವುದು ಪತ್ತೆಯಾಗಿದೆ. ಈ ಮೊತ್ತದ ಹಿಂದೆ ಇದುವರೆಗೂ ಯಾವುದೇ ರಾಜಕೀಯ ಪಕ್ಷದ ನೆರಳು ಕಂಡು ಬಂದಿಲ್ಲ. ಹಣ ಮತ್ತು ವಾಹನವನ್ನು ಜಪ್ತಿಪಡಿಸಿಕೊಂಡಿರುವ ಹೆಬ್ಬಗೋಡಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.