ಹುಬ್ಬಳ್ಳಿ: ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ನಾಗರಾಜ ಛಬ್ಬಿ ಮತ್ತಿತರ ಮುಖಂಡರು ಕೈ ನಾಯಕರ ವಿರುದ್ಧ ಸಿಡಿದೆದ್ದಿದ್ದಾರೆ. ನಾಗರಾಜ್ ಛಬ್ಬಿ ಕೆಪಿಸಿಸಿ ಸದಸ್ಯತ್ವಕ್ಕೆ ತಮ್ಮ ಬೆಂಬಲಿಗರೊಡನೆ ಶನಿವಾರ ಸಾಮೂಹಿಕವಾಗಿ ರಾಜಿನಾಮೆ ಸಲ್ಲಿಸುವ ಮೂಲಕ ಪಕ್ಷಕ್ಕೆ ಸೆಡ್ಡು ಹೊಡೆಯಲಿದ್ದಾರೆ ಎನ್ನಲಾಗಿದೆ. ಜೊತೆಗೆ ಬಿಜೆಪಿ ಸೇರ್ಪಡೆಯ ವದಂತಿ ಕೂಡ ಹರಿದಾಡಲಾರಂಭಿಸಿದೆ.
ಡಿ.ಕೆ.ಶಿವಕುಮಾರ್ ಆಪ್ತರಾಗಿದ್ದ ಛಬ್ಬಿಗೆ ಟಿಕೆಟ್ ದೊರೆಯುವ ಬದಲು, ಸಿದ್ದರಾಮಯ್ಯ ಶಿಷ್ಯ ಎಂದೇ ಗುರುತಿಸಿಕೊಂಡಿದ್ದ ಸಂತೋಷ್ ಲಾಡ್‍ಗೆ ಟಿಕೆಟ್ ದೊರತಿರುವುದರಿಂದ ಕಾಂಗ್ರೆಸ್ ಬಣ ರಾಜಕೀಯವೂ ಸಹ ಬಹಿರಂಗಗೊಂಡಿದೆ. ಕಲಘಟಕಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‍ನ ತೀವ್ರ ಆಕಾಂಕ್ಷಿಯಾಗಿದ್ದ ನಾಗರಾಜ್ ಛಬ್ಬಿ ಆಗಲೇ ಪ್ರಚಾರಕಾರ್ಯವನ್ನು ಪ್ರಾರಂಭಿಸಿದ್ದರು.
ಆದರೆ ಸಂತೋಷ್ ಲಾಡ್‍ಗೆ ಟಿಕೆಟ್ ಘೋಷಣೆಯಾದ ಹಿನ್ನೆಲೆ ನಾಗರಾಜ್ ಛಬ್ಬಿ ಅಸಮಧಾನ ಸ್ಫೋಟಗೊಂಡಿದೆ.
ನಾಳೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದೊಡನೆ ಕೆಪಿಸಿಸಿ ಸದಸ್ಯತ್ವದಕ್ಕೂ ನಾಗರಾಜ್ ಛಬ್ಬಿ ರಾಜೀನಾಮೆ ಸಲ್ಲಿಸಲಿದ್ದು, ಜೊತೆಗೆ ಅವರ ಬೆಂಬಲಿಗರೂ ಸಹ ತಮ್ಮ ನಾಯಕರನ್ನು ಹಿಂಬಾಲಿಸಲಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷ ಮದನ ಕುಲಕರ್ಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿರನ್ ಪಾಟೀಲ್ ಕುಲಕರ್ಣಿ, ಹುಬ್ಬಳ್ಳಿ ಧಾರವಾಡ ಪಾಲಿಕೆ ಸದಸ್ಯ ಸೆಂದಿಲ್ ಕುಮಾರ್ ಸೇರಿದಂತೆ ಹಲವರು ನಾಳೆ ರಾಜಿನಾಮೆ ಸಲ್ಲಿಸುವ ಸಾಧ್ಯತೆಯಿದೆ.