ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದ್ದು, ಪ್ರಕರಣ ತೀವ್ರ ಸ್ವರೂಪಕ್ಕೆ ತಿರುಗಿದೆ. ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮದಲ್ಲಿ ನಡೆದ ಘಟನೆ ಸಂಬಂಧಿಸಿ, ಇದೀಗ ಸುರಪುರ ವಿಧಾನಸಭಾ ಕ್ಷೇತ್ರದಾದ್ಯಂತ 2 ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸುರಪುರ ಕ್ಷೇತ್ರದಲ್ಲಿ ನಾಳೆ ರಾತ್ರಿ 8 ಗಂಟೆವರೆಗೂ ನಿಷೇಧಾಜ್ಞೆ ಜಾರಿ ಮಾಡಿ ಯಾದಗಿರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 3 ಕೆಎಸ್ಆರ್ಪಿ ತುಕಡಿ, 1 ಅರೆಸೇನಾ ಪಡೆ, ಇಬ್ಬರು ಡಿವೈಎಸ್‌ಪಿ, 5 ಸಿಪಿಐ, 10 ಪಿಎಸ್‌ಐ, 100 ಕಾನ್ಸ್ಟೇಬಲ್ಗಳನ್ನು ನಿಯೋಜಿಸಲಾಗಿದೆ.
ಸುರಪುರದ ಕಾಂಗ್ರೆಸ್ನ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಮ್ಮುಖದಲ್ಲೇ ಕಲ್ಲು ತೂರಾಟ ನಡೆದಿದೆ. ಕಾಂಗ್ರೆಸ್ ಮುಖಂಡರ ಕಾರಿನ ಮೇಲೆ ಕೆಲವು ಮಂದಿ ಮಚ್ಚಿನಿಂದಲೂ ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕನ ಬೆಂಬಲಿಗರು ಕಾರುಗಳಲ್ಲಿ ಹಾರ್ನ್ ಮಾಡಿ ತೆರಳುತ್ತಿದ್ದರು. ಇದಕ್ಕೆ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ಹಾರ್ನ್ ಮಾಡದಂತೆ ಆಕ್ಷೇಪ ಎತ್ತಿದ್ದು, ಇದೇ ವಿಷಯಕ್ಕೆ ಜಗಳ ಆರಂಭವಾಗಿತ್ತು.
ಘಟನೆ ಸಂಬಂಧ ಪೊಲೀಸರು ಈಗಾಗಲೇ 4 ಪ್ರಕರಣ ದಾಖಲಿಸಿಕೊಂಡಿದ್ದು, ಗಲಾಟೆಯಲ್ಲಿ ಭಾಗಿಯಾದ 118 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈವರೆಗೆ 18 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.