ಕೊಪ್ಪಳ: ನಿಗದಿತ ಅವಧಿಗಿಂತ ಹೆಚ್ಚಿಗೆ ಸಮಯ ತೆಗೆದುಕೊಂಡಿದ್ದಕ್ಕೆ ಪೊಲೀಸರು ಮಧ್ಯಪ್ರವೇಶಿಸಿ ಬಿ.ಎಲ್.ಸಂತೋಷ್ ಭಾಷಣವನ್ನು ಮೊಟಕುಗೊಳಿಸಿದ ಘಟನೆ ಭಾನುವಾರ ಮರಳಿ ಗ್ರಾಮದ ರಾಯಲ್ ರಿಚ್ ಕೌಂಟಿ ಹೋಟೆಲ್‍ನಲ್ಲಿ ನಡೆದಿದೆ. ಬಿಜೆಪಿ ಮಾಧ್ಯಮ ಪ್ರಕೋಷ್ಠದಿಂದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನ ಆಯೋಜಿಸಲಾಗಿತ್ತು. ಕಾರ್ಯಕ್ರಮ ಖಚಿತ ಸಮಯ ನಿಗದಿಗೊಳಿಸಿದ್ದ ಕಾರಣ ಬಿ.ಎಲ್.ಸಂತೋಷ್ ರ ಭಾಷಣವನ್ನು ಮೊಟಕುಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕಾರ್ಯಕ್ರಮದಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಬಿಜೆಪಿ ಸಾಮಾಜಿಕ ಜಾಲತಾಣಗಳ ಘಟಕದ ಸುಮಾರು ಏಳುನೂರು ಕಾರ್ಯಕರ್ತರು ಭಾಗಿಯಾಗಿದ್ದರು. ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿತ್ತು. ಕಾರ್ಯಕ್ರಮ ಮುಗಿಯಲು ನಿಗದಿತ ಸಮಯಕ್ಕಿಂತ ಐದು ನಿಮಿಷ ಹೆಚ್ಚಾಗಿದ್ದರಿಂದ, ಅಧಿಕಾರಿಗಳು ಕಾರ್ಯಕ್ರಮವನ್ನು ಅಂತ್ಯಗೊಳಿಸಲು ಸೂಚನೆ ನೀಡಿದರು .ಆಗ ಬಿ.ಎಲ್.ಸಂತೋಷ್ ಸಂಕ್ಷಿಪ್ತ ಭಾಷಣಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.