ಬೆಂಗಳೂರು : ದುಬಾರಿ ಸುಗಂಧ ದ್ರವ್ಯ ಅಂಬರ್ ಗ್ರೀಸ್‍ನ್ನು ಕೇರಳದಿಂದ ಅಕ್ರಮವಾಗಿ ಸಾಗಿಸಿ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 15 ಕೋಟಿ ರೂ. ವೆಚ್ಚದ 49 ಕೆಜಿ ಅಂಬರ್ ಗ್ರೀಸ್‍ನ್ನು ವಶಪಡಿಸಿಕೊಳ್ಳಲಾಗಿದೆ.
ಕೇರಳ ಮೂಲದ ಸಾಜಿರ್, ಸಲೀಂ, ಚಾಲ್ರ್ಸ್, ವಿಜು ಮತ್ತು ನೌಷಾದ್ ಬಂಧಿತ ಆರೋಪಿಗಳು. ಕೇರಳದಲ್ಲಿ ತ್ರಿಶೂರ್‍ನಲ್ಲಿ ಮೀನುಗಾರರ ಬಳಿ ಆರೋಪಿಗಳು ಅಂಬರ್ ಗ್ರೀಸ್ ಸಂಗ್ರಹಿಸಿದ್ದರು. ಬೆಂಗಳೂರಿನಲ್ಲಿ ಬಂದು ಗ್ರಾಹಕರನ್ನು ಹುಡುಕಿ ಮಾರುವ ಯತ್ನದಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಹೊಂದಿದ್ದ ಪೊಲೀಸರು ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಅಂಬರ್ ಗ್ರೀಸ್?
ತಿಮಿಂಗಲದ ವಾಂತಿಯಾಗಿರುವ ಈ ಸಮುದ್ರ ಉತ್ಪನ್ನ ಘನರೂಪದ ಬಂಗಾರಕ್ಕಿಂತ ಮೌಲ್ಯ ಹೊಂದಿದೆ. ದುಬಾರಿ ಸುಗಂಧ ದ್ರವ್ಯಗಳ ಬಳಕೆಯಲ್ಲಿ, ದುಬಾರಿ ಖಾದ್ಯವಸ್ತುಗಳಿಗಾಗಿಯೂ ಸಹ ಪರಿಮಳ ದ್ರವ್ಯವಾಗಿ ಬಳಕೆಯಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಪ್ರತಿ ಕೆಜಿಗೆ ಕೋಟಿ ರೂ.ಗಳಿಗೂ ಹೆಚ್ಚಿದೆ. ಕೃತಕವಾಗಿ ಇದನ್ನು ತಿಮಿಂಗಲಗಳಿದ ಪಡೆಯಲು ಸಾಧ್ಯವಿಲ್ಲದಿರುವುದೂ ಸಹ ಇದರ ಮೌಲ್ಯ ಹಾಗೂ ಬೇಡಿಕೆಯನ್ನು ಹೆಚ್ಚಿಸಿದೆ.