ಇಸ್ಲಾಮಾಬಾದ್: ನ್ಯಾಯಾಲಯದ ಆದೇಶದ ಮೇಲೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಲು ಅವರ ನಿವಾಸದೆದುರು ಪೊಲೀಸರು ಜಮಾವಣೆಗೊಂಡಿದ್ದಾರೆ
ಲಾಹೋರ್‌ನಲ್ಲಿರುವ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಅವರ ನಿವಾಸದ ಹೊರಗೆ ಶಸ್ತ್ರಸಜ್ಜಿತ ಪೊಲೀಸ್ ವಾಹನಗಳು ಬೀಡುಬಿಟ್ಟಿದ್ದಾರೆ
ಇಮ್ರಾನ್ ಖಾನ್ ನಿವಾಸದ ಬಳಿ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಬೆಂಬಲಿಗರು, ತಮ್ಮ ನಾಯಕನ ಬಂಧನಕ್ಕೆ ವಿರೋಧ ವ್ಯಕ್ತಪಡಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಜಲಫಿರಂಗಿ ಮತ್ತು ಅಶ್ರುವಾಯು ಬಳಸಿ ಬೆಂಬಲಿಗರನ್ನು ಪೊಲೀಸರು ಚದುರಿಸಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಲಾಯಿತು.
ಡಿಐಜಿ ಶಹಜಾದ್ ಬುಖಾರಿ ಮಾತನಾಡಿ, ಕಾನೂನುಬದ್ಧ ಪ್ರಕ್ರಿಯೆಯಡಿ ಕ್ರಮಕೈಗೊಳ್ಳಲು ಪೊಲೀಸರು ಆಗಮಿಸಿದ್ದಾರೆ. ಬೆಂಬಲಿಗರು ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಜನರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವುದಿಲ್ಲ ಎಂದು ಭಾವಿಸಿದ್ದೇವೆ. ಇಮ್ರಾನ್ ಖಾನ್ ಅವರ ನಿವಾಸದ ಹೊರಗೆ ನೆರೆದಿದ್ದ ಸಾರ್ವಜನಿಕರಿಗೂ ಈ ಬಗ್ಗೆ ಮನವರಿಕೆ ಮಾಡಲಾಗುವುದು ಎಂದು ಮನವಿ ಮಾಡಿದರು.
ಏನಿದು ತೋಶಾ-ಖಾನಾಪ್ರಕರಣ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಅಧಿಕಾರವಧಿಯಲ್ಲಿ ದುಬಾರಿ ನೆಕ್ಲೆಸ್ ಉಡುಗೊರೆಯಾಗಿ ಬಂದಿತ್ತು. ಆದರೆ ಅವರು ಅದನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ (ತೋಶಾ-ಖಾನಾ) ಠೇವಣಿ ಇಡದೇ ವ್ಯಾಪಾರಿಯೊಬ್ಬರಿಗೆ 18 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆಂಬ ಆರೋಪ ಕೇಳಿಬಂದಿತ್ತು.