ನವದೆಹಲಿ: ಚುನಾವಣಾ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಪರ ಮತಬೇಟೆಗಿಳಿದಿದ್ದಾರೆ. ಕನ್ನಡದಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕರ್ನಾಟಕ ಅಭಿವೃದ್ಧಿಯ ಶಕ್ತಿಕೇಂದ್ರ. ಕಷ್ಟಪಟ್ಟು ದುಡಿಯುವ ರಾಜ್ಯದ ಜನರಿಗೆ ಧನ್ಯವಾದಗಳು. ಕರ್ನಾಟಕದ ಬೆಳವಣಿಗೆಯ ಪಯಣವನ್ನು ವೇಗಗೊಳಿಸಲು ಹಾಗೂ ಬಡವರನ್ನು, ಸಮಾಜದಲ್ಲಿ ಮೂಲೆಗುಂಪಾದವರನ್ನು ,ದಮನಿತರನ್ನು ಸಶಕ್ತಗೊಳಿಸಲು ಬಿಜೆಪಿ ಬದ್ಧವಾಗಿದೆ. ನಾವು ನಮ್ಮ ಅಭಿವೃದ್ಧಿಯ ಕಾರ್ಯಸೂಚಿಯನ್ನು ಆಧರಿಸಿ ಜನಾಶೀರ್ವಾದವನ್ನು ಬಯಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
ರಾಜ್ಯ ಬಿಜೆಪಿ ಘಟಕವೂ ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಕಮಲ ಅರಳುವ ದಿನಾಂಕ ನಿಶ್ಚಯವಾಗಿದೆ! ಸ್ಪಷ್ಟ ಬಹುಮತದೊಂದಿಗೆ ಆಶೀರ್ವಾದ ಮಾಡಲು ಕನ್ನಡಿಗರು ಉತ್ಸುಕರಾಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಇಂದಿನಿಂದ ಹಗಲಿರುಳು ಶ್ರಮಿಸಲು ಕಾರ್ಯಕರ್ತರ ಪಡೆ ಸಜ್ಜಾಗಿದೆ. ಕರ್ನಾಟಕ ಗೆಲ್ಲಲಿದೆ ಎಂದು ಬರೆದುಕೊಂಡಿದೆ. ರಾಜ್ಯ ಬಿಜೆಪಿ ಘಟಕದ ಅರಳಲಿದೆ ಕಮಲ, ಗೆಲ್ಲಲಿದೆ ಕರ್ನಾಟಕ ಎಂಬ ಟ್ವೀಟ್ ಟ್ಯಾಗ್ ಮಾಡಿರುವ ಮೋದಿ ರಾಜ್ಯದ ಜನತೆಯ ಆಶೀರ್ವಾದ ಬಯಸಿದ್ದಾರೆ.