ಕಾಂಗ್ರೆಸ್ ಕರ್ನಾಟಕವನ್ನು ತಮ್ಮ ನಾಯಕರ ತಿಜೋರಿ ತುಂಬಿಸುವ ಖಜಾನೆಯಂತೆ ಕಾಣುತ್ತಿದೆ. ಕಾಂಗ್ರೆಸ್ ನೀಡುತ್ತಿರುವ ಎಲ್ಲಾ ಗ್ಯಾರೆಂಟಿಗಳೂ ಪೊಳ್ಳು ಭರವಸೆಗಳಾಗಿದ್ದು, ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಘೋಷಿಸಿರುವ ಈ ಭರವಸೆಗಳು ಯಾವುದೇ ಸಕಾರಾತ್ಮಕ ಧೋರಣೆಯನ್ನು ಹೊಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ದಾವಣಗೆರೆಯ ಜಿಎಂಐಟಿ ಮೈದಾನದಲ್ಲಿ ನಡೆದ ಬಿಜೆಪಿಯ ಮಹಾಸಂಗಮ ಸಮಾವೇಶದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಯಥಾಪ್ರಕಾರ ರಾಜ್ಯ ಕಾಂಗ್ರೆಸ್ ನಾಯಕರನ್ನು ತೀವ್ರವಾಗಿ ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷ ನೀಡುತ್ತಿರುವ ಭರವಸೆಗೇ ಯಾವುದೇ ಗ್ಯಾರೆಂಟಿಯಿಲ್ಲ ಎಂದು ಟೀಕಿಸಿದ ಪ್ರಧಾನಿ ಮೋದಿ, ಹಿಮಾಚಲ ಪ್ರದೇಶದಲ್ಲಿಯೂ ಸಹ ಕಾಂಗ್ರೆಸ್ ಇದೇ ರೀತಿ ದೊಡ್ಡದೊಡ್ಡ ಭರವಸೆಗಳನ್ನು ನೀಡಿತ್ತು. ಆದರೆ ಯಾವುದೇ ಭರವಸೆಯನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ. ಹೀಗಾಗಿ ಯಾವುದೇ ಸಕಾರಾತ್ಮಕ ಇಚ್ಛೆಯಿಲ್ಲದೇ ಕಾಂಗ್ರೆಸ್ ಕೇವಲ ಗ್ಯಾರೆಂಟಿ ಘೋಷಿಸುವ ಮೂಲಕ ಅಧಿಕಾರದ ಕನಸು ಕಾಣುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಅವಕಾಶವಾದಿ ಸಮ್ಮಿಶ್ರ ಸರ್ಕಾರದ ದೆಸೆಯಿಂದಾಗಿ ಕರ್ನಾಟಕಕ್ಕೆ ವಂಚನೆಯಾಗಿದೆ ಎಂದು ಪರೋಕ್ಷವಾಗಿ ಜೆಡಿಎಸ್ ಪಕ್ಷವನ್ನೂ ಸಹ ತರಾಟೆಗೆ ತೆಗೆದುಕೊಂಡ ಪ್ರಧಾನಿ, ಕರ್ನಾಟಕದ ಅಭಿವೃದ್ಧಿಗಾಗಿ ಸ್ಥಿರ ಸರ್ಕಾರ ಬೇಕಿದೆ ಎಂದರು.
ಶುಕ್ರವಾರವಷ್ಟೇ ಕೇಂದ್ರದ ಪ್ರಸ್ತಾವನೆಗಾಗಿ ಕಳಿಸಿರುವ ಮೀಸಲಾತಿ ಹೆಚ್ಚಳವನ್ನು ಪ್ರಸ್ತಾಪಿಸಿದ ಮೋದಿ, ದಲಿತರು ಆದಿವಾಸಿಗಳೂ ಸೇರಿದಂತೆ ವಂಚಿತ ಸಮುದಾಯ ಅಭಿವೃದ್ಧಿ ಬಿಜೆಪಿ ಸರ್ಕಾರದ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಶ್ರಮಿಸುತ್ತಿದೆ. ನಿಮ್ನ ವರ್ಗದ ಜನರಿಗೆ ಹಕ್ಕು ಪತ್ರ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದರು.
ರೈತರ ಹಿತದೃಷ್ಟಿಯಿಂದ ಜಾರಿಗೊಳಿಸಲಾಗಿರುವ ಪಿಎಂ ಕಿಸಾನ್ ಸಮ್ಮಾನ್, ಬೆಂಗಳೂರು ಮೈಸೂರು ಎಕ್ಸ್‍ಪ್ರೆಸ್ ವೇ, ವೈಟ್ ಫೀಲ್ಡ್ ಮಾರ್ಗದ ಮೆಟ್ರೋ ಲೋಕಾರ್ಪಣೆ ಮುಂತಾದವುಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಜವಳಿ ಹಬ್ ದಾವಣಗೆರೆಯಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಿದ್ದು ಇವೆಲ್ಲವೂ ನಿಮ್ಮಿಂದಲೇ ಸಾಧ್ಯವಾಗುತ್ತಿದೆ ಎಂದರು.
ಮೋದಿ ಸಮಾಧಿಗೆ ಗುಂಡಿ ತೋಡುತ್ತೇನೆ ಎಂದು ಕಾಂಗ್ರೆಸ್ ಹೇಳಿತ್ತು ಆದರೆ ಕಮಲ ಅರಳಲಿದೆ ಎಂದು ಜನ ಹೇಳುತ್ತಿದ್ದಾರೆ ಎಂದ ಮೋದಿ ಕಮಲ್ ಖಿಲೇಂಗೇ, ಕಮಲ್ ಖಿಲೇಂಗೆ ಎಂದು ಜನರೊಂದಿಗೆ ಉದ್ಗರಿಸಿದರು. ಜನರು ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿಕೊಂಡು ಕೈ ಬೀಸುವಂತೆ ಹೇಳಿದ ಮೋದಿ ಈ ಪ್ರಕಾಶ ಕರ್ನಾಟಕದೆಲ್ಲಡೆ ವ್ಯಾಪಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಬಸವರಾಜ್ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್, ಯಡಿಯೂರಪ್ಪ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಉಪಸ್ಥಿತರಿದ್ದರು.